ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯ
ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಬಿಎಸ್ಪಿ ಕಾರ್ಯಕರ್ತರು ಹುಬ್ಬಳ್ಳಿಯ ಮಿನಿವಿಧಾನಸೌಧದ ಎದುರು ಬುಧವಾರ ಧರಣಿ ನಡೆಸಿದರು. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕಳಸಾ ಬಂಡೂರಿ ಯೋಜನೆಯೊಂದೇ ಮಾರ್ಗ. ಆದರೆ ಯಾವುದೇ ಸರ್ಕಾರಗಳು ಯೋಜನೆಯ ಅನುಷ್ಠಾನಕ್ಕೆ ಆಸಕ್ತಿ ತೋರಿಲ್ಲ. ಯೋಜನೆಯ ಹೆಸರಲ್ಲಿ ರಾಜಕಾರಣ ಮಾಡಿದ್ದಲ್ಲದೇ, ಭ್ರಷ್ಟಾಚಾರ ವೆಸಗಿದ್ದಷ್ಟೇ ಬಂತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ವಿಷಯದಲ್ಲಿ ಗೋವಾ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಸುಖಾಸುಮ್ಮನೇ ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಕುಡಿಯಲು ನೀಡದಿರುವ ಗೋವಾ ಸರ್ಕಾರ ನೀಚ ಕೃತ್ಯ ವೆಸಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಕೂಡಲೇ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಕೋರಿದರು. ಪ್ರತಿಭಟನೆಯಲ್ಲಿ ಪ್ರೇಮನಾಥ ಚಿಕ್ಕತುಂಬಳ, ರೇವಣಸಿದ್ದಪ್ಪ ಹೊಸಮನಿ, ಹನುಂತಪ್ಪ ತಗರಗುಂಟಿ, ಬಸವರಾಜ ಹೊಸಮನಿ, ಗುರುಮೂರ್ತಿ ಬೆಂಗಳೂರು, ಪ್ರಕಾಶ ವೀರಾಪೂರ ಮತ್ತಿತರರಿದ್ದರು.