ಬ್ಯಾಂಕ್ನಲ್ಲಿ ಅವ್ಯವಹಾರ ನಡೆಸಿದವರಿಗೆ ಪಾಠ ಕಲಿಸಿ
ಹುಬ್ಬಳ್ಳಿ: ಇಲ್ಲಿಯ ಗುರುಸಿದ್ದೇಶ್ವರ ಸಹಕಾರಿ ಬ್ಯಾಂಕ್ನ್ನು ಆರ್ಥಿಕವಾಗಿ ದಿವಾಳಿಗೆ ಎಬ್ಬಿಸಿದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಹೊಸಬರನ್ನು ಚುನಾಯಿಸುವಂತೆ ಬ್ಯಾಂಕಿನ ಮಾಜಿ ಚೇರ್ಮನ್ ಹಾಗೂ ಈ ಬಾರಿಯ ಅಭ್ಯರ್ಥಿ ತಾರಾದೇವಿ ವಾಲಿ ಆಗ್ರಹಿಸಿದ್ದಾರೆ. ತಮ್ಮ ಹಾಗೂ ಪ್ರಕಾಶ ಸಾಂಬ್ರಾಣಿ ನೇತೃತ್ವದ 7 ಜನ ಸದಸ್ಯರನ್ನು ಚುನಾಯಿಸುವಂತೆ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಮೂಲಕ ಮತದಾರರಲ್ಲಿ ಮನವಿ ಮಾಡಿದ ತಾರಾದೇವಿ ವಾಲಿ, ತಮ್ಮೊಂದಿಗೆ ಪ್ರಭುದೇವ ಪಟ್ಟಣಶೆಟ್ಟಿ, ಗುರುಸಿದ್ದಪ್ಪ ಬಳ್ಳೊಳ್ಳಿ, ಬಸವರಾಜ ಬೆಲ್ಲದ, ಸುಜಯ ವಾಲಿ ಹಾಗೂ ಶ್ರೀಶೈಲಪ್ಪ ಶೆಟ್ಟರ ಕಣದಲ್ಲಿದ್ದಾರೆ ಎಂದರು. ಬ್ಯಾಂಕಿನ ಈ ಹಿಂದಿನ ಆಡಳಿತ ಮಂಡಳಿಯಿಂದ ಸಾಕಷ್ಟು ಅವ್ಯವಹಾರಗಳು ನಡೆದಿವೆ. ರೈತರ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆ. ಸಾಲ ಮನ್ನಾ ಯೋಜನೆಯಡಿ ಅವ್ಯವಹಾರ ನಡೆದಿರುವ ದಾಖಲೆಗಳಿದ್ದು, ಹಿಂದಿನ ಆಡಳಿತ ಮಂಡಳಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಳೆಯ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದೆ ಎಂದರು. ವೀರಣ್ಣ ಹಂಜಿ, ಶಿವಾನಂದ ಬೆಲ್ಲದ, ಶ್ರೀಶೈಲಪ್ಪ ಶೆಟ್ಟರ ಮತ್ತಿತರರು ಹಾಜರಿದ್ದರು.
ನಾಳೆ ಹುಬ್ಬಳ್ಳಿಗೆ ರಾವ್
ಹುಬ್ಬಳ್ಳಿ: ತಾಂತ್ರಿಕ ಉದ್ಯಮಶೀಲತೆಗೆ ಬಿವಿಬಿ ಕೇಂದ್ರ ಕುರಿತ ವಿಚಾರ ಸಂಕಿರಣ ಫೆ. 15ರಂದು ಸಂಜೆ 5.15ಕ್ಕೆ ನಗರದ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಭಾರತ ರತ್ನ ಪುರಸ್ಕೃತ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್, ಕೆಎಲ್ಇ ಸಂಸ್ಥೆಯ ಚೇರ್ಮನ್ ಡಾ. ಪ್ರಭಾಕರ ಕೋರೆ ಪಾಲ್ಗೊಳ್ಳುವರು.
ಶಿವಾಜಿ ಜಯಂತ್ಯುತ್ಸವ: ಇಂದು ಸಭೆ
ಧಾರವಾಡ: ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ಫೆ. 19ರಂದು ಜಿಲ್ಲಾಡಳಿತ ಆಚರಿಸಲಿದ್ದು, ಪೂರ್ವಭಾವಿಯಾಗಿ ಫೆ. 14ರ ಮಧ್ಯಾಹ್ನ 2.30ಕ್ಕೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ, ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪ್ರವಾಸ
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 15ರಂದು ಬೆಳಗಾವಿಯ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿಗೆ ಆಗಮಿಸಿ ನಗರದ ನೆಹರೂ ಮೈದಾನದಲ್ಲಿ ಜರುಗುವ ಪ್ರಾಥಮಿಕ ಶಾಲಾ ಶಿಕ್ಷಕರ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅನಂತರ ವಿಮಾನ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.