ಮಾರ್ಚ್ನೊಳಗೆ ಕಾರ್ಮಿಕರ ಬಾಕಿ ಹಣ ಇತ್ಯರ್ಥ
ಹುಬ್ಬಳ್ಳಿ: ರಾಜ್ಯ ಸಾರಿಗೆ ಸಂಸ್ಥೆ ಕಾರ್ಮಿಕರ ಎಲ್ಲ ಬಾಕಿ ಹಣವನ್ನು ಇದೇ ಮಾರ್ಚನೊಳಗೆ ಇತ್ಯರ್ಥಪಡಿಸುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೀಡಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಕಚೇರಿಯ ನೂತನ ಕಟ್ಟಡ, ಚಾಲಕರ ತರಬೇತಿ ಕೇಂದ್ರ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾರಿಗೆ ಸಂಸ್ಥೆ ವತಿಯಿಂದ ಭವಿಷ್ಯ ನಿಧಿಯ ಬಾಕಿ ಹಣ ರು. 115 ಕೋಟಿ ತುಂಬಬೇಕಿದ್ದು, ಸಾಲದ ಮೂಲಕ ಈ ಬಾಕಿ ಹಣ ಭರಿಸಲಾಗುವುದು. ಮುಂಬರುವ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹಾಗೂ ನಿವೃತ್ತರಿಗೆ ಸಕಾಲದಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾರಿಗೆ ಬಸ್ಗಳ ಮಾರ್ಗದಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ಗಳ ಸಂಚಾರವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಂಸ್ಥೆಗೆ ನಿತ್ಯ ರು. 20 ಲಕ್ಷ ಹಾಗೂ ವಾರ್ಷಿಕ ರು. 5-6 ಕೋಟಿ ಆದಾಯವಾಗುತ್ತಿದೆ.
ಕಾರ್ಮಿಕರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾರ್ಮಿಕರು ಸಹ ಸಂಸ್ಥೆಯ ಬಗ್ಗೆ ಗೌರವ ತಾಳಬೇಕು.
ಎಲ್ಲ ತಾಲೂಕು ಕೇಂದ್ರಗಳಲ್ಲಿ ನಗರ ಸಾರಿಗೆ ಬಸ್ಗಳ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಸಣ್ಣ ಬಸ್ಗಳನ್ನು ಖರೀದಿಸಲಾಗಿದೆ. ಹುಬ್ಬಳ್ಳಿಯ ನಗರ ಸಾರಿಗೆ ಬಸ್ ನಿಲ್ದಾಣ (ಸಿಬಿಟಿ) ರು. 14 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹಳೇ ಬಸ್ ನಿಲ್ದಾಣವನ್ನು ಶೀಘ್ರದಲ್ಲಿ ಆಧುನೀಕರಣಗೊಳಿಸಲಾಗುವುದು. ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ ರು. 9ಕ್ಕೂ ಹೆಚ್ಚು ಹೆಚ್ಚಳವಾಗಿದೆ. ಡೀಸೆಲ್ ಬೆಲೆಯಲ್ಲಿ ಏರಿಕೆಯಾಗದಿದ್ದರೆ ಸಾರಿಗೆ ಸಂಸ್ಥೆಗಳು ಸಾಕಷ್ಟು ಲಾಭ ಗಳಿಸುತ್ತಿದ್ದವು. ಆದರೂ ಸಾರಿಗೆ ಸಂಸ್ಥೆಯ ನಷ್ಟದ ಪ್ರಮಾಣ ಕಡಿಮೆಯಾಗಿದ್ದು, ಆದಷ್ಟು ಬೇಗ ಲಾಭ ಗಳಿಕೆಯತ್ತ ಮುನ್ನುಗ್ಗಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ಬಿಎಂಟಿಸಿ ಹೊರತು ಪಡಿಸಿ ಇನ್ನುಳಿದ ಸಾರಿಗೆ ಸಂಸ್ಥೆಯ ಘಟಕಗಳ ಚಾಲಕರಿಗೆ ಸ್ವರ್ಣ ಪದಕ ಪಡೆಯಲು 15 ವರ್ಷದ ಅಪಘಾತ ರಹಿತ ಚಾಲನೆಯ ಮಾನದಂಡ ಅಳವಡಿಸಲಾಗುತ್ತಿದೆ. ಇದನ್ನು 10 ವರ್ಷಕ್ಕೆ ಇಳಿಸುವಂತೆ ಸಾರಿಗೆ ಸಚಿವರನ್ನು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಸಾರ್ವಜನಿಕರಿಗೆ ಪ್ರಯಾಣದಲ್ಲಿ ವಿನಾಯಿತಿಯಂಥ ಹೆಚ್ಚಿನ ಸೌಲಭ್ಯ ನೀಡುತ್ತಿರುವುದರಿಂದ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಬಿಎಸ್ಆರ್ಟಿಸಿಯಿಂದ ಅವಳಿ ನಗರದ ಚಿತ್ರಣ ಬದಲಾವಣೆಯಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಪ್ರಸಾದ ಅಬ್ಬಯ್ಯ, ವಾಯವ್ಯ ಸಾರಿಗೆ ಸಂಸ್ಥೆಗೆ ರು. 100 ಕೋಟಿಗಳ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿದರು. ಎಸ್.ವಿ. ಹುಲ್ಯಾಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್, ಹುಬ್ಬಳ್ಳಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಸ್.ಆರ್. ನಮಾಜಿ, ಸದಾನಂದ ಡಂಗನವರ ಮತ್ತಿತರರು ಉಪಸ್ಥಿತರಿದ್ದರು.
ವೀಣಾ ಹಂಜಿ ಪ್ರಾರ್ಥಿಸಿದರು. ಸುನೀಲ ಪತ್ರಿ ಮತ್ತು ಆರತಿ ದೇವಶಿಖಾಮಣಿ ನಿರೂಪಿಸಿದರು. ಪಿ.ವೈ. ನಾಯಕ್ ವಂದಿಸಿದರು.
ಸ್ವರ್ಣ ಪದಕಕ್ಕೆ ಅಪಘಾತ ರಹಿತ ಚಾಲನೆಗೆ 15 ವರ್ಷದ ಬದಲು 10 ವರ್ಷದ ಸೇವಾ ಅವಧಿ ಪರಿಗಣಿಸುವಂತೆ ಸೂಚಿಸಲಾಗುವುದು. ರಾಜ್ಯದ ವಿವಿಧೆಡೆ ಬಸ್ ನಿಲ್ದಾಣಗಳನ್ನು ನವೀಕರಿಸಲಾಗುವುದು ಹಾಗೂ ಕೆಲವೆಡೆ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗುವುದು.
- ರಾಮಲಿಂಗಾ ರೆಡ್ಡಿ,
ಸಾರಿಗೆ ಸಚಿವ