ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 17
ಜಗದೀಶ ನಗರ ಆಶ್ರಯ ಮನೆಗಳನ್ನು ವಿಮಾನ ನಿಲ್ದಾಣ ಅಭಿವೃದ್ಧಿಗೆ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ವದಂತಿ ಹಬ್ಬಿಸಿ ಮೂಲಸೌಕರ್ಯ ನೀಡಲಾಗುತ್ತಿಲ್ಲ ಎಂದು ಜಗದೀಶ ನಗರ ಸೇವಾ ಸಮಿತಿಯ ಮುಖಂಡ ಪ್ರೇಮನಾಥ ಚಿಕ್ಕತುಂಬಳ ದೂರಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕುಲ ಗ್ರಾಮಕ್ಕೆ ಹೊಂದಿಕೊಂಡಿರು ಜಗದೀಶ ನಗರದಲ್ಲಿ 612 ಆಶ್ರಯ ಮನೆಗಳನ್ನು ನೀಡಲಾಗಿದೆ. ಆದರೀಗ ಅಗತ್ಯ ಮೂಲಸೌಕರ್ಯ ಒದಗಿಸದಿರುವ ಪರಿಣಾಮ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಕಾಲೋನಿ ನಿವಾಸಿಗಳು ಬಳಲುತ್ತಿದ್ದಾರೆಂದರು.
ಈಗಾಗಲೇ ಸರ್ಕಾರ ಫಲಾನುಭವಿಗಳಿಂದ ಸಾಲದ ಹಣ ರು. 25 ಸಾವಿರ ಪಾವತಿಸಿಕೊಂಡಿದೆ. ಆದರೆ ಇದೀಗ ವಿಮಾನ ನಿಲ್ದಾಣ ಅಭಿವೃದ್ಧಿಗೆ ಜಾಗ ವಶ ಪಡಿಸಿಕೊಳ್ಳುವುದಾಗಿ ಹೇಳಿ ಸೌಕರ್ಯ ನೀಡುತ್ತಿಲ್ಲ. ಒಂದೊಮ್ಮೆ ಮನೆಗಳನ್ನು ಸರ್ಕಾರ ವಶ ಪಡಿಸಿಕೊಳ್ಳುವುದೇ ಆಗಿದ್ದರೆ ಸೂಕ್ತ ಪರಿಹಾರ ಕಲ್ಪಿಸಲಿ. ಪರಿಹಾರ ನೀಡಿದ ಬಳಿಕವೇ ಮನೆಗಳನ್ನು ಸ್ಥಳಾಂತರಿಸಬೇಕು. ಮಾರುಕಟ್ಟೆ ಬೆಲೆಗೆ ತಕ್ಕಂತೆ ಪರಿಹಾರ ನೀಡಬೇಕು ಎಂದು ಚಿಕ್ಕತುಂಬಳ ಒತ್ತಾಯಿಸಿದರು. ಪಾಲಿಕೆ ಸೌಲಭ್ಯ ಕಲ್ಪಿಸದೇ ಇರುವುದನ್ನು ಪ್ರತಿಭಟಿಸಿ ಸೋಮವಾರವೇ ಮೊದಲ ಹಂತದ ಹೋರಾಟ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ಉಗ್ರರೂಪ ಪಡೆದುಕೊಳ್ಳಲಿದೆ ಎಂದರು. ವಿಶ್ವನಾಥ ಭಂಡಾರಿ, ಶಿವಾನಂದ, ಅಶೋಕ ಇರಕಲ್, ಪಿ. ಎಚ್. ಚವ್ಹಾಣ ಇದ್ದರು.