ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಾಕರಸಾಸಂನಿ ನಿವೃತ್ತ ನೌಕರರ ವೇತನ ಪಾವತಿಸಲು ಕ್ರಮ

Mainashree
Updated On : 18 Feb 2014, 10:10 am

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ 425 ಸಿಬ್ಬಂದಿಗೆ ಸಂದಾಯವಾಗಬೇಕಿರುವ ವೇತನ ಮತ್ತಿತರ ಸೌಲಭ್ಯವನ್ನು ಫೆಬ್ರುವರಿ ತಿಂಗಳ ಅಂತ್ಯದಲ್ಲಿ ಪಾವತಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಾಕಸಾ ಸಂಸ್ಥೆ ಸಿಬ್ಬಂದಿಗೆ ವೇತನ ಮತ್ತಿತರ ಸೌಲಭ್ಯಗಳು ಸಂದಾಯವಾಗದೇ ಇರುವ ಬಗ್ಗೆ 'ಕನ್ನಡಪ್ರಭ' ವಿಶೇಷ ವರದಿ ಮೂಲಕ ಬೆಳಕು ಚೆಲ್ಲಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸೋಮವಾರ ನಡೆದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾಜಿ ಸಚಿವರು ಆಗಿರುವ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ವಾಕರಸಾ ಸಂಸ್ಥೆಯಲ್ಲಿ ದುಡಿದು ನಿವೃತ್ತ ಹೊಂದಿದ ನೌಕರರಿಗೆ ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡದೆ ಇರುವುದು ನಿಜವೇ ಎಂದು ಚುಕ್ಕೆ ಗುರುತಿನಡಿಯಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 2013ರ ಏಪ್ರೀಲ್ ತಿಂಗಳವರೆಗೆ ನಿವೃತ್ತಿ ಹೊಂದಿದ ಎಲ್ಲ ಅರ್ಹ ನೌಕರರಿಗೆ ನಿವೃತ್ತಿ ವೇತನ ಹಾಗೂ ಇತರ ಆರ್ಥಿಕ ಸೌಲಭ್ಯಗಳನ್ನು ಪಾವತಿಸಲಾಗಿದೆ. 2013ರ ಮೇ ತಿಂಗಳಿಂದ ಡಿಸೆಂಬರ್ ಅವಧಿಯವರೆಗೆ ನಿವೃತ್ತರಾದ ನೌಕರರಿಗೆ ಭವಿಷ್ಯ ನಿಧಿ ಹಾಗೂ ಇತರೆ ಸೌಲಭ್ಯಗಳನ್ನು ಪಾವತಿಸಲಾಗಿದೆ. ಉಳಿದಂತೆ ಉಪದಾನ ಗ್ರಾಚ್ಯುಟಿ ರು. 27 ಕೋಟಿ ಹಾಗೂ ರಜೆ ನಗದೀಕರಣ ರು. 7 ಕೋಟಿ ಹೀಗೆ ಒಟ್ಟು ರು. 34 ಕೋಟಿ ಪಾವತಿಸುವುದು ಬಾಕಿ ಉಳಿದಿದೆ ಎಂದರು.
ಸರ್ಕಾರದಿಂದ ನಿಗಮಕ್ಕೆ ಮಾರ್ಚ್ 2014ರವರೆಗೆ ಬಿಡುಗಡೆ ಮಾಡುವ ಬಾಕಿ ಅನುದಾನದ ಮೊತ್ತದಲ್ಲಿ ಪಾವತಿಸಲು ಕ್ರಮ ಜರುಗಿಸಲಾಗುವುದೆಂದ ಸಚಿವರು, ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ದೊರಕದೇ ಇರುವ ಸಿಬ್ಬಂದಿಗೆ ತಕ್ಷಣ ಹಣ ಸಂದಾಯವಾಗುವಂತೆ ಕ್ರಮಕೈಗೊಳ್ಳಲಾಗುವುದು. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಕ್ಷಣ ವೇತನ ಬಾಕಿ ಸೇರಿದಂತೆ ಮತ್ತಿತರ ಸೌಲಭ್ಯಗಳು ದೊರಕುವಂತೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.
ನಿವೃತ್ತ ನೌಕರರಿಗೆ ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ಬಾರದಲ್ಲಿ ಬಾಕಿ ಉಳಿದಿರುವ ವೇತನ ಸೇರಿದಂತೆ ಮತ್ತಿತರ ಎಲ್ಲ ಸೌಲಭ್ಯಗಳನ್ನು ಪಾವತಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಎಂ.ಸಿ. ನಾಣಯ್ಯ ಒಕ್ಕೊರಲಿನಿಂದ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement