ವಿಜಯ ಕುಲಕರ್ಣಿ ಅವಿರೋಧ ಆಯ್ಕೆ
ಧಾರವಾಡ: ಮಹಾಲಕ್ಷ್ಮೀ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವಿಜಯ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ಐ. ಹುಲಕುಂದ ಪ್ರಕಟಿಸಿದ್ದಾರೆ. ಎರಡನೇ ಬಾರಿಗೆ ವಿಜಯ ಕುಲಕರ್ಣಿ ಬ್ಯಾಂಕಿನ ಆಡಳಿತ ವಹಿಸಿಕೊಂಡಿದ್ದಾರೆ. ಬ್ಯಾಂಕ್ನ ನಿರ್ದೇಶಕರಾದ ಶಶಿಧರ ಹೊಸೂರ, ಅಮೃತೇಶ್ವರ ಬಳ್ಳೊಳ್ಳಿ, ರಮೇಶ ಬಣಕಾರ, ಗುರುಪಾದಪ್ಪ (ರಾಜು) ಮರಳಪ್ಪನವರ, ಸೋಮಶೇಖರ ಸರೂರ ಸೇರಿದಂತೆ ಇತರರು ವಿಜಯ ಕುಲಕರ್ಣಿ ಅವರನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕುಲಕರ್ಣಿ, ಸದ್ಯದಲ್ಲಿಯೇ ಬ್ಯಾಂಕಿನ ಐದು ಶಾಖೆಗಳನ್ನು ಧಾರವಾಡ ನಗರ, ಗರಗ, ಹುಬ್ಬಳ್ಳಿ, ನವಲಗುಂದ ಮತ್ತು ಅಣ್ಣಿಗೇರಿಯಲ್ಲಿ ತೆರೆಯಲಾಗುವುದು. ಇದಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಪರವಾನಗಿ ಸಿಗಲಿದೆ ಎಂದರು. ಸಾಲ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದ್ದು, ಪ್ರತಿದಿನ ಅಂದಾಜು ರು. 1.50 ಲಕ್ಷ ಪಿಗ್ಮಿ ಸಂಗ್ರಹವಾಗುತ್ತಿದ್ದು, ಚಿಕ್ಕ ವ್ಯಾಪಾರಸ್ಥರು ಮತ್ತು ವಹಿವಾಟುದಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಬ್ಯಾಂಕು ರು. 36 ಲಕ್ಷ ನಿವ್ವಳ ಲಾಭದಲ್ಲಿದೆ. ಇದೇ ವೇಳೆ ಅನುತ್ಪಾದಕ ಆಸ್ತಿ ಪ್ರಮಾಣ ತಗ್ಗಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.