ಕರಾವಳಿಯಲ್ಲಿ ಅರಳಿದ ಸೂರ್ಯಕಾಂತಿ
ಅಂಕೋಲಾ: ಕರಾವಳಿ ಭಾಗದ ಉಪ್ಪಿನ ಸಾರದ ಭೂಮಿಯಲ್ಲಿ ಚೊಚ್ಚಲ ಬಾರಿಗೆ ಸೂರ್ಯಕಾಂತಿ ಅರಳಿ ನಿಂತಿದ್ದು, ಇಲ್ಲಿನ ಕೃಷಿಕರ ಬಾಳಲ್ಲಿ ಉತ್ಸಾಹ ಮೂಡಿಸಿದೆ. ಕರಾವಳಿಯ ಉಷ್ಣ ವಾತಾವರಣದಲ್ಲಿಯೂ ಸೂರ್ಯಕಾಂತಿ ಕೃಷಿ ಮಾಡಲು ಸಾಧ್ಯವಿದೆ ಎಂದು ಇಲ್ಲಿಯ ತೆಂಕಣಕೇರಿಯ ಪ್ರಗತಿಪರ ರೈತ ನಾಗರಾಜ ನಾಯಕ ಸೂರ್ಯಕಾಂತಿ ಬೆಳೆದು ಹೊಸ ಪ್ರಯೋಗದಲ್ಲಿ ಯಶಸ್ಸಿನ ದಾರಿ ಕಂಡಿದ್ದಾರೆ.
20 ಗುಂಟೆಯಲ್ಲಿ ಬೆಳೆ: ಹೌದು.. ಕರಾವಳಿ ಭಾಗದ ಭೂಮಿಯಲ್ಲಿ ಕೇವಲ ಬತ್ತ, ಶೇಂಗಾ, ಕಲ್ಲಂಗಡಿಯಂಥ ಬೆಳೆಗಳಿಗೆ ಮಾತ್ರ ಸೊತ್ತು ಎಂದು ತಿಳಿದಿದ್ದರಿಂದ, ಸೂರ್ಯಕಾಂತಿಯಂಥ ಬೆಳೆಗಳನ್ನು ಬೆಳೆಯಲು ಯಾರೂ ಪ್ರಯೋಗವೇ ನಡೆಸಿರಲಿಲ್ಲ. ಆದರೆ, ಪ್ರಗತಿಪರ ರೈತ ನಾಗರಾಜ ನಾಯಕ ಕೃಷಿಯಲ್ಲಿ ಹೊಸತೆನನ್ನಾದರೂ ತೋರಿಸಲೇಬೇಕು ಎಂದು ಛಲ ತೊಟ್ಟು ಸುಮಾರು 20 ಗುಂಟೆ ಜಮೀನಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿ ತನ್ನ ಕೃಷಿ ಭೂಮಿಯಲ್ಲಿ ಸೂರ್ಯಕಾಂತಿ ನಳನಳಿಸುವಂತೆ ಮಾಡಿದ್ದಾರೆ.
ರೈತರಿಗೆ ಮಾದರಿ: ಇಡೀ ಗದ್ದೆಯ ಬಯಲಿನಲ್ಲಿ ಈಗ ಬಂಗಾರದ ಹೊಳಪು. ರೈತ ನಾಗರಾಜ ನಾಯಕರ ಮುಖದಲ್ಲಿಯೂ ಹುಮ್ಮಸ್ಸು, ಸಂಭ್ರಮ ಇದೆ. ಕರಾವಳಿ ಪ್ರದೇಶದಲ್ಲಿ ಇಂಥ ಸಾಹಸಕ್ಕೆ ಇದುವರೆಗೆ ಯಾರೂ ಕೈ ಹಾಕಿರಲಿಲ್ಲ. ನಾಗರಾಜ ನಾಯಕರದು ಈ ಬೆಳೆ ಮಾತ್ರ ಅಲ್ಲ, ಬತ್ತದ ವಿಶೇಷ 7 ತಳಿಗಳನ್ನು ಬಿತ್ತನೆ ಮಾಡಿ ಸಾಧನೆ ಮಾಡಿದವರು. ಹೀಗೆ ಒಂದಿಲ್ಲ ಒಂದು ಕೃಷಿ ಸಾಧನೆಯಲ್ಲಿ ತೊಡಗಿಸಿಕೊಂಡ ನಾಗರಾಜ ನಾಯಕ ಅವರ ಈ ಕ್ರಿಯಾಶೀಲತೆಗೆ ಸುತ್ತಲಿನ ರೈತರು, ನಾಗರಿಕರು ಹೆಮ್ಮೆ ಪಡುತ್ತಾರೆ. ಸರ್ಕಾರ ಇಂತಹ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಿದೆ.
100-120 ದಿನಗಳಲ್ಲಿ ಸೂರ್ಯಕಾಂತಿ ಫಸಲು ಪಡೆಯಬಹುದಾದ ಬೆಳೆಯಾಗಿದ್ದು, ಈ ಸೂರ್ಯಕಾಂತಿ ಅರಳುವಿಕೆಯ ಹಿಂದೆ ನಾಗರಾಜ. ನಾಗರಾಜರ ಪತ್ನಿ ಮಾಲಾ ನಾಯ್ಕ ಅವರ ಬೆವರು ಕೂಡ ಕೆಲಸ ಮಾಡಿದೆ. ಕರಾವಳಿಯಲ್ಲಿಯೇ ಮೊದಲ ಬಾರಿಗೆ ಸೂರ್ಯಕಾಂತಿ ಅಂಕೋಲಾದ ತೆಂಕಣಕೇರಿಯಲ್ಲಿ ಅರಳಿ ನಿಂತಿರುವುದನ್ನು ನೋಡಲು ದಿನವು ನೂರಾರು ಜನರು ಆಗಮಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಸಹ ನಾಗರಾಜ್ ನಾಯ್ಕ ಅವರ ಭೂಮಿಯತ್ತ ಹೆಜ್ಜೆ ಹಾಕಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಶೇಂಗಾ, ಬತ್ತ, ಕಲ್ಲಂಗಡಿ ಬೆಳೆಗೆ ನೀಡುವ ಶ್ರಮಕ್ಕಿಂತ, ಸೂರ್ಯಕಾಂತಿಗೆ ಕಡಿಮೆ ಶ್ರಮ ಸಾಕು. ಪ್ರಾಯೋಗಿಕವಾಗಿ 20 ಗುಂಟೆ ಭೂಮಿಯಲ್ಲಿ ಸೂರ್ಯಕಾಂತಿ ಬೆಳೆದು ಯಶಸ್ಸು ಕಂಡಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬೆಳೆಯುವ ಉತ್ಸಾಹ ಇದೆ. ಬೆಳೆದ ಸೂರ್ಯಕಾಂತಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕೃಷಿ ಇಲಾಖೆ, ಸರ್ಕಾರ ಮಾಡಬೇಕು. ಆಗ ಮಾತ್ರ ಲಾಭದಾಯಕ ಬೆಳೆ ಬೆಲೆಯಲು ಪ್ರೋತ್ಸಾಹ ದೊರೆತಂತಾಗುತ್ತದೆ.
- ನಾಗರಾಜ್ ನಾಯಕ, ಸೂರ್ಯಕಾಂತಿ ಬೆಳೆದ ರೈತ
ಬಯಲುಸೀಮೆ ಘಟ್ಟದ ಮೇಲಿನ ಪ್ರದೇಶದಲ್ಲಿ ಒಣ ಬೇಸಾಯ ಮಾಡುತ್ತಿದ್ದ ಸ್ಥಳದಲ್ಲಿ ಸೂರ್ಯಕಾಂತಿ ಕೃಷಿ ಮಾಡುತ್ತಿದ್ದರು. ಉತ್ತರ ಕನ್ನಡದ ಕರಾವಳಿಯಲ್ಲಿ ಸೂರ್ಯಕಾಂತಿ ಬೆಳೆ ತೆಗೆದ ಉದಾಹರಣೆ ಇಲ್ಲ. ಪ್ರಥಮ ಬಾರಿಗೆ ಅಂಕೋಲಾದ ತೆಂಕಣಕೇರಿಯಲ್ಲಿ ಇಂಥ ಪ್ರಯೋಗ ನಡೆದಿದೆ. ಪ್ರಯತ್ನಶೀಲರಾದರೆ ನಾಗರಾಜ ನಾಯಕರಂತೆ ಯಾರು ಬೇಕಾದರೂ ಸಾಧನೆ ಮಾಡಬಹುದು.
- ಶಂಕರಮೂರ್ತಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಅಂಕೋಲಾ