ಕರ್ನಾಟಕ ಅಂದರೆ ಬರಿ ಬೆಂಗಳೂರಲ್ಲ
ಧಾರವಾಡ: ಕರ್ನಾಟಕ ಎಂದರೆ ಬರೀ ಬೆಂಗಳೂರು ಮತ್ತು ಮೈಸೂರು ಮಾತ್ರ ಅಲ್ಲ, ಕರ್ನಾಟಕದಲ್ಲಿ ಇತರೆ ಪ್ರದೇಶಗಳು ಇವೆ ಎನ್ನುವ ಅರಿವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರ ಬೆಂಗಳೂರಿನಲ್ಲಿ ಕಾವ್ಯ-ಸಂಸ್ಕೃತಿ ಗ್ರಾಮ ಸ್ಥಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಅವರು ಮುಖ್ಯಮಂತ್ರಿಗೆ ಪತ್ರ ಬರೆದು, ಕರ್ನಾಟಕ ವಿವಿಯ ಸ್ವಾಧೀನದಲ್ಲಿರುವ ನೂರಾರು ಎಕರೆ ಜಮೀನಿನಲ್ಲಿ ಕಾವ್ಯ ಸಂಸ್ಕೃತಿ ಗ್ರಾಮ ಸ್ಥಾಪಿಸಬಹುದು ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಾರವಾಗಿ ಪತ್ರ ಬರೆದಿರುವ ಅವರು, ಕಾವ್ಯ-ಸಂಸ್ಕೃತಿ ಗ್ರಾಮವನ್ನು ಸ್ಥಾಪಿಸಲು ಧಾರವಾಡ ಸೂಕ್ತ ಸ್ಥಳವಲ್ಲವೇ ಕರ್ನಾಟಕ ವಿವಿ ನೂರಾರು ಎಕರೆ ಭೂಮಿಯಲ್ಲಿ ಈ ಸಂಸ್ಕೃತಿ ಗ್ರಾಮವನ್ನು ಕಟ್ಟುವುದಕ್ಕೆ ಸೂಕ್ತ ಸ್ಥಳವಲ್ಲವೇ ಎಂದು ಪಾಪು ಪ್ರಶ್ನಿಸಿದ್ದಾರೆ.
ಅದೇ ರೀತಿ, ಪುರಾತನ ಭಾಷಾ ಕೇಂದ್ರ ಧಾರವಾಡದಲ್ಲಿ ಸ್ಥಾಪನೆಗೊಳ್ಳಬೇಕೆಂದು ಕೇಳುವುದು ಅಪ್ರಸ್ತುತವೇ? ಈ ರಾಜ್ಯದ ಎಲ್ಲ ಪ್ರದೇಶಗಳನ್ನು ಸರಿಸಮಾನವಾಗಿ ನೋಡಬೇಕು. ಅಂದರೆ ಮಾತ್ರ ರಾಜ್ಯದಲ್ಲಿ ಭ್ರಾತೃತ್ವ ಭಾವನೆ ಬೆಳೆದು ಮತ್ತು ಎಲ್ಲರಲ್ಲಿಯೂ ರಾಜ್ಯದ ಬಗ್ಗೆ ಅಭಿಮಾನ ಹೆಚ್ಚುತ್ತದೆ ಎಂದಿದ್ದಾರೆ.
ನೀವಷ್ಟೇ ಬುದ್ಧಿವಂತರಲ್ಲ...: ಬೆಂಗಳೂರಿನಲ್ಲಿ ಇರುವವರು ಅಂದರೆ, ಅಲ್ಲಿಯ ಬುದ್ಧಿಜೀವಿಗಳು ಮಾತ್ರವೇ ಕರ್ನಾಟಕದವರು ಎಂದು ತಿಳಿಯದೇ, ರಾಜ್ಯದ ಇತರ ಪ್ರದೇಶಗಳ ಜನರನ್ನು ಸಮಾನ ಭಾವನೆಯಿಂದ ನೋಡಿಕೊಳ್ಳುವುದನ್ನು ರಾಜ್ಯ ಸರ್ಕಾರ ತಿಳಿಯಬೇಕು. ಬೆಂಗಳೂರು ಮೈಸೂರುಗಳ ಮೋಹ ಈ ರಾಜ್ಯವನ್ನು ಭದ್ರಗೊಳಿಸುವುದಿಲ್ಲ. ನೀವು ಈ ಪ್ರಭುತ್ವದ ಹೊಣೆಯನ್ನು ಹೊತ್ತಿರುವುದರಿಂದ ಇದರ ಅಖಂಡತೆ ಯಾವ ಕಾರಣದಿಂದಲೂ ಸಡಿಲಾಗದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಯ ಜವಾಬ್ದಾರಿ ಆಗಿದೆ ಎಂದಿದ್ದಾರೆ.
ಸರ್ಕಾರದ ವಿವೇಕಶೂನ್ಯತೆ...: ಹಿಂದೂಸ್ತಾನಿ ಸಂಗೀತದ ತವರುಮನೆ ಧಾರವಾಡ ಆಗಿದೆ ಎನ್ನುವುದನ್ನು ಇಡೀ ದೇಶವೇ ಬಲ್ಲದು. ಪಂ. ಮಲ್ಲಿಕಾರ್ಜುನ ಮನಸೂರ, ಡಾ. ಭೀಮಸೇನ್ ಜೋಶಿ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಸವಾಯಿ ಗಂಧರ್ವ, ಪಂ. ವೆಂಕಟೇಶಕುಮಾರ, ಕೈವಲ್ಯ ಕುಮಾರ ಗುರುವ ಮೊದಲಾದವರೆಲ್ಲರೂ ಧಾರವಾಡದವರು. ಈ ಹಿಂದೂಸ್ತಾನಿ ಸಂಗೀತ ದಿಗ್ಗಜರು ಧಾರವಾಡದವರು ಆಗಿದ್ದರೂ ಹಿಂದೂಸ್ತಾನಿ ಸಂಗೀತದ ವಿಶ್ವವಿದ್ಯಾಲಯವನ್ನು, ಹಿಂದೂಸ್ತಾನಿ ಸಂಗೀತದ ಗಾಯಕರೊಬ್ಬರೂ ಇಲ್ಲದ ಮೈಸೂರಲ್ಲಿ ಸ್ಥಾಪಿಸುವುದು ಸರ್ಕಾರದ ವಿವೇಕಶೂನ್ಯತೆಯನ್ನು ತೋರಿಸುತ್ತದೆ. ಸರ್ಕಾರದಲ್ಲಿರುವ ನೀವು ಏನನ್ನೇ ಮಾಡಿದರೂ ಈ ರಾಜ್ಯ ಕರ್ನಾಟಕವಾಗಲು ಹೋರಾಟ ಮಾಡಿಕೊಂಡು ಅದನ್ನು ವಾಸ್ತವಕ್ಕೆ ತರಲು ಶ್ರಮಿಸಿದ ಉ-ಕವನ್ನು ರಾಜ್ಯ ಸರ್ಕಾರ ಮರೆಯಬಾರದು ಎಂದು ಪತ್ರದಲ್ಲಿ ಪಾಪು ಪ್ರತಿಪಾದಿಸಿದ್ದಾರೆ.
ಈಗ ಏನೇ ಆದರೂ ಬೆಂಗಳೂರು, ಮೈಸೂರಿನಲ್ಲಿಯೇ ಆಗಬೇಕೆನ್ನುವ ಧೋರಣೆ ಸರ್ಕಾರದಲ್ಲಿ ಇದ್ದಂತೆ ಇದೆ. ಮೈಸೂರು ಬೆಂಗಳೂರುಗಳತ್ತ ಉದಾಸೀನ ತೋರಿ ಎಂದು ನಾನು ಹೇಳುವುದಿಲ್ಲ. ರಾಜ್ಯದ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಕೊಡಗು ಸಮೇತ ಮೈಸೂರು ಪ್ರದೇಶ ಎಲ್ಲವೂ ಸರಿಸಮಾನವಾಗಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಚಿಂತನೆ ನಡೆಸಬೇಕೆಂದು ಪಾಪು ತಮ್ಮ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.