ಕೇಂದ್ರ ಸರ್ಕಾರದ ಬೌದ್ಧಿಕ ದಿವಾಳಿಯ ಪರಮಾವಧಿ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 19
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೌದ್ಧಿಕ ದಿವಾಳಿಯ ಪರಮಾವಧಿಗೆ ತಲುಪಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಮೋದಿ ಹಿಂದೆ ಬಿದ್ದಿರುವುದನ್ನು ನೋಡಿ ಕಾಂಗ್ರೆಸ್ ಹತಾಶೆಯ ಸ್ಥಿತಿಗೆ ತಲುಪಿದೆ.
ಇದೇ ಕಾರಣಕ್ಕೆ ರ್ಯಾಲಿಗಳಿಗೂ ಸೇವಾ ತೆರಿಗೆ ಪಾವತಿಸಿ ಎಂದು ಕಟ್ಟಪ್ಪಣೆ ಹೊರಡಿಸುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ದಿವಾಳಿಯಾಗಿದ್ದರೆ ಹೇಳಿ, ಅದನ್ನು ಸಹ ನಮ್ಮ ಯುವಕರು ತುಂಬಿ ಕೊಡುತ್ತಾರೆ. ಆದರೆ, ಸೇವಾ ತೆರಿಗೆ ಪಾವತಿಸಿ ಎಂದು ಆದೇಶಿಸುವುದು ಯಾವ ನ್ಯಾಯ ಎಂದು ಜೋಶಿ ಪ್ರಶ್ನಿಸಿದರು.
ಲೋಕಸಭೆಯನ್ನು ಕತ್ತಲಿನಲ್ಲಿಟ್ಟು ತೆಲಂಗಾಣ ಮಸೂದೆಗೆ ಒಪ್ಪಿಗೆ ಪಡೆದಿರುವುದು ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ಸಿನ ಕರಾಳ ಮುಖದ ಅನಾವರಣ. ತೆಲಂಗಾಣ ರಚನೆಗೆ ಸಂಬಂಧಿಸಿದಂತೆ ಅಲ್ಲಿಯ ಜನರ ಮನಸ್ಸನ್ನು ಘಾಸಿಗೊಳಿಸದೇ ಪರಿಹಾರ ಕಂಡುಕೊಳ್ಳಬಹುದಿತ್ತು. ಗೃಹ ಸಚಿವ ಸುಶೀಲಕುಮಾರ ಶಿಂದೆ ಹಾಗೂ ಚಿದಂಬರಂ ಅವರಿಗೆ ಕನಿಷ್ಠ ರಾಜಕೀಯ ಜ್ಞಾನವೂ ಇಲ್ಲದ್ದರಿಂದ ಸೀಮಾಂಧ್ರ ಹಾಗೂ ಲೋಕಸಭೆಯಲ್ಲಿ ಗದ್ದಲ- ಗಲಾಟೆಗಳಾಗುತ್ತಿವೆ. ದೇಶದ ಜನತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕೆಟ್ಟ ಆಡಳಿತಕ್ಕೆ ಲೋಕಸಭೆ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದರು.
ಲೋಕಸಭೆ ಚುನಾವಣೆಗೆ ಕರ್ನಾಟಕದ 18 ಅಭ್ಯರ್ಥಿಗಳ ಮೊದಲನೇ ಪಟ್ಟಿ ಪೂರ್ಣಗೊಂಡಿದ್ದು, ಕೇಂದ್ರದ ಚುನಾವಣಾ ಸಮಿತಿ ರಚನೆ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುವುದು. ಫೆ. 21 ಅಥವಾ 22ರಂದು ಮೊದಲನೇ ಪಟ್ಟಿ ಬಿಡುಗಡೆಯಾಗುವ ಸಂಭವ ಇದೆ ಎಂದರು.
ಶಿವಾಜಿ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ, ಕಲಘಟಗಿ, ಫೆ. 19
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ತಹಸೀಲ್ದಾರ್ ಕೆ.ಆರ್. ಕುಲಕರ್ಣಿ ಪೂಜೆ ಸಲ್ಲಿಸಿದರು.
ತಾಲೂಕು ಮರಾಠಾ ಸಮಾಜದ ಎಸ್.ಎಸ್. ಸಾವಕಾರ, ಗಣೇಶ ಮೊತೆನವರ, ಬಾಳು ಖಾನಾಪುರ, ಶಂಕರಗಿರಿ ಬಾವನವರ, ಮಹಾಂತೇಶ ತಹಸೀಲ್ದಾರ, ಪಾಂಡುರಂಗ ರಾಮಜಿ, ಶಾಸಕರ ಆಪ್ತ ಕಾರ್ಯದರ್ಶಿ ಎನ್.ಎಂ. ಹರಿಶಂಕರ ಮತ್ತಿರರ ಗಣ್ಯರು ಉಪಸ್ಥಿತರಿದ್ದರು.