ಸಾಧಕರು ಜಾತಿಗೆ ಸೀಮಿತಗೊಳ್ಳದಿರಲಿ
ಧಾರವಾಡ: ಶಿವಾಜಿ ಮಹಾರಾಜ, ಟೀಪು ಸುಲ್ತಾನರು ಒಂದೇ ಜಾತಿಗೆ ಹೋರಾಡಿ ಮಹನೀಯರಾದವರಲ್ಲ. ಅಖಂಡ ಭಾರತದ ಹಿಂದು ಧರ್ಮಕ್ಕಾಗಿ ಹೋರಾಡಿದವರು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಮನೋಧರ್ಮ ನಿಲ್ಲಬೇಕಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಕ್ಕೆ ನೆರೆಯ ರಾಷ್ಟ್ರಗಳಿಂದ ನಿರಂತರವಾಗಿ ತೊಂದರೆ ಉಂಟಾಗಲು ಪ್ರಮುಖ ಕಾರಣ ನಮ್ಮಲ್ಲಿನ ವಿಚಾರವಾದಿಗಳ ಕೆಲವು ತಪ್ಪು ಸಿದ್ಧಾಂತಗಳು ಎಂದು ಜೋಶಿ ಹೇಳಿದರು.
ಒಂದು ಸಾಮಾನ್ಯ ಕುಟುಂಬದಲ್ಲಿ ಬೆಳೆದ ಶಿವಾಜಿ, ಪರಕೀಯರಿಗೆ ನಮ್ಮ ದೇಶದ ಜನತೆ ನಮಸ್ಕರಿಸಿ ಅವರ ಅಣತಿಯಂತೆ ಬದುಕು ನಡೆಸುತ್ತಿರುವುದು ದಾಸ್ಯದ ಸಂಕೇತ. ನಮ್ಮ ಜನತೆ ಯಾರಿಗೂ ತಲೆ ಬಾಗಿಸಬಾರದು ಎಂದು ಪರಕೀಯರ ವಿರುದ್ಧ ಹೋರಾಟ ಮಾಡಿದ್ದವರು. ಆದರೆ, ಇಂದು ನಮ್ಮ ಜನತೆಯು ನಮ್ಮವರ ದಾಸ್ಯರಾಗಿಯೇ ಬದುಕುತ್ತಿರುವುದು ದೊಡ್ಡ ದುರಂತ. ಆದ್ದರಿಂದ ಇಂತಹ ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶಗಳು ನಮ್ಮ ಯುವ ಜನಾಂಗದ ಬದುಕಿಗೆ ಹತ್ತಿರವಾಗುವಂತೆ ಪಠ್ಯಗಳಲ್ಲಿ ಅಳವಡಿಸಬೇಕು ಎಂದರು. ಶಿವಾಜಿಯಂತಹ ಸಾಧಕರು ನಮ್ಮ ಸಮಾಜದಲ್ಲಿ ಹುಟ್ಟದಿದ್ದರೆ ನಾವೆಲ್ಲರೂ ಇನ್ನೂ ಮೊಘಲರ ದಾಸ್ಯದಲ್ಲಿ ಬದುಕಬೇಕಾಗಿರುತ್ತಿತ್ತು. ಜನನಿಯೇ ಮೊದಲ ಗುರು ಎಂಬುದಕ್ಕೆ ಶಿವಾಜಿ ಹಾಗೂ ಆತನ ತಾಯಿ ಜೀಜಾಬಾಯಿ ಬಹು ದೊಡ್ಡ ಉದಾಹರಣೆ ಎಂದು ಹೇಳಿದರು. ಶಿವಾಜಿ ಮಹಾರಾಜರ ಜೀವನ ಕುರಿತು ಮೋಹನ ನಾಗಮ್ಮನವರ, ಅರಸನ ಮಗ ಅರಸನಾಗಿ, ಬಡವನ ಮಗ ಬಡವನಾಗಿಯೇ ಬಾಳಬೇಕು ಎಂಬ ಸಿದ್ಧಾಂತಕ್ಕೆ ಶಿವಾಜಿ 400 ವರ್ಷಗಳ ಹಿಂದೆ ತಿಲಾಂಜಲಿ ಹಾಡಿದ್ದರು. ಛಲ, ಆತ್ಮಾಭಿಮಾನವಿದ್ದರೆ ಯಾರು ಬೇಕಾದರೂ ಅರಸನಾಗಿ ಅನ್ಯಾಯದ ವಿರೋಧಿಯಾಗಬಹುದು. ಇದು ನಮ್ಮ ಯುವಪೀಳಿಗೆಗೆ ತಿಳಿದರೆ ಸಾಕು, ದೇಶ ಮುಂದುವರಿದಂತೆ ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು.
ಅಧ್ಯಕ್ಷತೆ ವಹಿಸಿ ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಅಪರ ಡಿಸಿ ಶಿವಾನಂದ ಕಾಪಸೆ, ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಸುಭಾಸ ಶಿಂಧೆ, ಮೋಹನ ಮೋರೆ, ಪಾಲಿಕೆ ಸದಸ್ಯ ರಾಜು ಅಂಬೋರೆ, ಶಂಕರ ಶೆಳಕೆ, ನಿರ್ಮಲಾ ಜವಳಿ ಇದ್ದರು. ಇಲ್ಲದೇ, ಮರಾಠಾ ವಿದ್ಯಾಪ್ರಸಾರಕ ಮಂಡಳ, ಕರ್ನಾಟಕ ಕ್ಷತ್ರಿಯ ಮರಾಠಾ ಮಹಾಒಕ್ಕೂಟ, ಶಹರ ಮರಾಠಾ ಸಮಾಜ, ಮರಾಠಾ ಯುವವೇದಿಕೆ ಪದಾಧಿಕಾರಿಗಳಿದ್ದರು.
ಒಂದು ಸಾಮಾನ್ಯ ಕುಟುಂಬದಲ್ಲಿ ಬೆಳೆದ ಶಿವಾಜಿ, ಪರಕೀಯರಿಗೆ ನಮ್ಮ ದೇಶದ ಜನತೆ ನಮಸ್ಕರಿಸಿ ಅವರ ಅಣತಿಯಂತೆ ಬದುಕು ನಡೆಸುತ್ತಿರುವುದು ದಾಸ್ಯದ ಸಂಕೇತ, ನಮ್ಮ ಜನತೆ ಯಾರಿಗೂ ತಲೆ ಬಾಗಿಸಬಾರದು ಎಂದು ಪರಕೀಯರ ವಿರುದ್ಧ ಹೋರಾಟ ಮಾಡಿದ್ದವರು. ಆದರೆ, ಇಂದು ನಮ್ಮವರು ದಾಸ್ಯರಾಗಿಯೇ ಬದುಕುತ್ತಿರುವುದು ದೊಡ್ಡ ದುರಂತ. ಆದ್ದರಿಂದ ಇಂಥ ವ್ಯಕ್ತಿಯ ಜೀವನದ ಪ್ರತಿ ಅಂಶಗಳು ಯುವ ಜನಾಂಗದ ಬದುಕಿಗೆ ಹತ್ತಿರವಾಗುವಂತೆ ಪಠ್ಯಗಳಲ್ಲಿ ಅಳವಡಿಸಬೇಕು.
- ಪ್ರಹ್ಲಾದ ಜೋಶಿ, ಸಂಸದ