23ರಿಂದ ಧಾರವಾಡ ಸಾಂಸ್ಕೃತಿಕ ಜನೋತ್ಸವ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 20
ಇಲ್ಲಿಯ ಆವಿಷ್ಕಾರ ಪ್ರಗತಿಪರ ವೇದಿಕೆಯು ಎಐಡಿಎಸ್ಒ ಹಾಗೂ ಎಐಡಿವೈಒ ಸಂಘಟನೆಗಳ ಆಶ್ರಯದಲ್ಲಿ ಫೆ. 23ರಿಂದ 26ರವರೆಗೆ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ 11ನೇ ಸಾಂಸ್ಕೃತಿಕ ಜನೋತ್ಸವ ಹಮ್ಮಿಕೊಂಡಿದೆ ಎಂದು ಸಂಚಾಲಕ ಎಚ್.ಜಿ. ದೇಸಾಯಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 23ರಿಂದ 25ರ ವರೆಗೆ ಮೂರು ದಿನ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಹಾಗೂ 26ರಂದು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ನಾಲಾಜಿ ಆಡಿಟೋರಿಯಂನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
23ರಂದು ಸಂಜೆ 6ಕ್ಕೆ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ ಉದ್ಘಾಟಿಸುವರು. ಖ್ಯಾತ ಸಿತಾರ ವಾದಕ ಉಸ್ತಾದ್ ಹಮೀದ್ ಖಾನ್ ಹಾಗೂ ಸಂಘಟನಾಕಾರ ಗಂಗಾಧರ ಬಡಿಗೇರ ಅತಿಥಿಗಳಾಗಿ ಭಾಗವಹಿಸುತ್ತಾರೆ. ಎಐಡಿಎಸ್ಒ ಜಿಲ್ಲಾಧ್ಯಕ್ಷ ಶರಣ ಗೊನವಾರ ಅಧ್ಯಕ್ಷತೆ ವಹಿಸುತ್ತಾರೆ ಎಂದರು.
ಅನಂತರ ಇಲ್ಲಿಯ ಕೃಷಿ ಕಾಲೇಜು ವಿದ್ಯಾರ್ಥಿಗಳಿಂದ ಭಾನುಪ್ರಕಾಶ ಕಡಗತ್ತೂರು ನಿರ್ದೇಶನದ, ಆವಿಷ್ಕಾರ ಪ್ರಸ್ತುತ ಪಡಿಸುವ 'ಮೋಜಿನ ಸೀಮೆಯಾಚೆ ಒಂದೂರು' ನಾಟಕ ಪ್ರದರ್ಶನ ನಡೆಯಲಿದೆ. ತದನಂತರ ವಿಜಯ ದೊಡಮನಿ ನಿರ್ದೇಶನದ 'ಉಚಲ್ಯಾ' ನಾಟಕ ಹಾಗೂ ಲಕ್ಷ್ಮಣ ಪೀರಗಾರ ನಿರ್ದೇಶನದ 'ಕೊಲ್ಲದಿರಿ ನನ್ನ ಕಣ್ತೆರೆಯುವ ಮುನ್ನ' ನಾಟಕ ಪ್ರದರ್ಶನಗೊಳ್ಳಲಿದೆ. 24ರ ಸಂಜೆ 6ಕ್ಕೆ ಹಿಂದೂಸ್ತಾನಿ ಗಾಯಕಿ ಡಾ. ಜಯದೇವಿ ಜಂಗಮಶೆಟ್ಟಿ ಭಾವಗೀತೆಗಳನ್ನು ಪ್ರಸ್ತುತ ಪಡಿಸುತ್ತಾರೆ. ಬಾಲಬಳಗ ವಿದ್ಯಾರ್ಥಿಗಳಿಂದ ಜುಗಲ್ಬಂದಿ ನಡೆಯಲಿದೆ. ಉಪ್ಪಿನ ಬೆಟಗೇರಿ ಕರವೀರಪ್ಪ ಭಜಂತ್ರಿಯಿಂದ ಶಹನಾಯಿ ವಾದನ ಹಾಗೂ ಮಾದನಭಾವಿ ಹನುಮಂತಪ್ಪ ಭಜಂತ್ರಿ ಅವರಿಂದ ಕ್ಲ್ಯಾರಿಯೋನೆಟ್ ವಾದನ ನಡೆಯಲಿದೆ. ಉಪಾಧ್ಯ ನೃತ್ಯ ವಿಹಾರದದಿಂದ ಕಾವ್ಯಾಧಾರಿತ ನೃತ್ಯ ಪ್ರದರ್ಶನಗೊಳ್ಳಲಿದೆ. ನಗುವಿನಲ್ಲೊಂದು ನೋವಿನ ಹೊಗೆಯಾಡಬೇಕು ವಿಷಯ ಕುರಿತು ಲೇಖಕ ಡಾ. ಶ್ರೀಧರ ಹೆಗಡೆ ಭದ್ರನ್ ಮಾತನಾಡಲಿದ್ದಾರೆ. ಅಲ್ಲದೇ, ನೃತ್ಯ ರೂಪಕ, ವಾದ್ಯ ಸಂಗಮವೂ ಇದೆ. 25ರಂದು ಸಂಜೆ 5ಕ್ಕೆ ಲೈಫ್ ಈಸ್ ಬ್ಯೂಟಿಫುಲ್ ನಾಟಕ, ಸಂಜೆ 7.15ಕ್ಕೆ ರಾಜ್ಯ ಪ್ರಶಸ್ತಿ ಪಡೆದ ಕೆ. ಶಿವರುದ್ರಯ್ಯ ನಿರ್ದೇಶನದ ದಾಟು ಸಿನಿಮಾ ಪ್ರದರ್ಶನ ನಡೆಯಲಿದೆ ಎಂದು ಎಚ್.ಜಿ. ದೇಸಾಯಿ ಮಾಹಿತಿ ನೀಡಿದರು.
ಫೆ. 26ರಂದು ಹುಬ್ಬಳ್ಳಿಯ ವೇದಿಕೆಯಲ್ಲಿ 2010ರ ಅತ್ಯುತ್ತಮ ಚಿತ್ರ, ಕೆ. ಶಿವರುದ್ರಯ್ಯ ನಿರ್ದೇಶನದ ಮಾಗಿಯ ಕಾಲ ಪ್ರದರ್ಶನಗೊಳ್ಳಲಿದೆ. ಅನಂತರ ನಡೆಯುವ ಸಂವಾದದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅವಳಿ ನಗರದ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕೆಂದು ದೇಸಾಯಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶರಣು ಗೊನವಾರ ಹಾಗೂ ಭವಾನಿ ಶಂಕರ ಇದ್ದರು.