ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೆಳ ಮಧ್ಯಮ ವರ್ಗಕ್ಕೆ ಮನೆ ಮೀಸಲು

Lingaraj Badiger
Updated On : 21 Feb 2014, 12:15 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 20
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಮಂಟೂರ ರಸ್ತೆಯ ಯಲ್ಲಾಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿ 2 (ಅಪಾರ್ಟ್‌ಮೆಂಟ್) ಮಾದರಿಯ ಆಶ್ರಯ ಮನೆಗಳು ಅಸಲಿಗೆ ಬಡಬಗ್ಗರಿಗಾಗಲ್ಲ ಕೆಳ ಮಧ್ಯಮ ವರ್ಗದವರಿಗೆ ಮೀಸಲಾದ ಮನೆಗಳು...!
ಹೌದು, ಜಿ 2 ಮಾದರಿಯ ಮನೆಗಳು ತೀರಾ ಬಡವರಿಗೆ ದಕ್ಕಲು ಸಾಧ್ಯವೇ ಇಲ್ಲ. ಏಕೆಂದರೆ ಈ ಮನೆಯ ಯೋಜನೆಯನ್ನು ನಿರ್ದಿಷ್ಟವಾಗಿ ಕೆಳ ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸಬೇಕೆಂದು ಉದ್ದೇಶದಿಂದಲೇ ನಿರ್ಮಿಸಲಾಗುತ್ತಿದೆ. ಎಲ್ಲರೂ ತಿಳಿದಿರುವ ಹಾಗೆ ಇದು ಇನ್ನುಳಿದ ಆಶ್ರಯ ಮನೆಗಳಂತಲ್ಲ ಒಂದಿಷ್ಟು ತುಟ್ಟಿ ಮನೆಗಳೇ ಆಗಿವೆ.
ನೀತಿ ಸಂಹಿತೆ ಗುಮ್ಮ: ಈ ಯೋಜನೆಯ ಬಗ್ಗೆ ಯಾವುದೇ ಸ್ಪಷ್ಟತೆ ಇರದಿದ್ದರೂ ಮನೆಗಳಿಗೆ ಅರ್ಜಿ ಆಹ್ವಾನಿಸಲು ಪ್ರಮುಖ ಕಾರಣ ನೀತಿ ಸಂಹಿತೆ ಎಂಬ ಗುಮ್ಮ. ಲೋಕಸಭೆ ಚುನಾವಣೆ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವುದು ನಿಶ್ಚಿತ. ಹೀಗಿರುವಾಗ ಅರ್ಜಿ ಪ್ರಕ್ರಿಯೆ ವಿಳಂಬವಾದರೆ ಚುನಾವಣೆ ಮುಗಿಯುವವರೆಗೂ ಯೋಜನೆ ಪ್ರಗತಿ ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಅರ್ಜಿ ಪ್ರಕ್ರಿಯೆ ಮುಗಿಸಲು ನಿರ್ಧರಿಸಲಾಗಿದೆ.
ರು. 3.86 ಲಕ್ಷಕ್ಕೊಂದು ಮನೆ: ಪ್ರಸ್ತುತ ನಿರ್ಮಿಸಲು ಉದ್ದೇಶಿಸಿರುವ ಮನೆ ಯೋಜನೆಗೆ ಕೆಳ ಮಧ್ಯಮ ವರ್ಗದವರೇ ಅರ್ಹರೆನಿಸಿಕೊಳ್ಳುತ್ತಾರೆ. ಇವರ ತಿಂಗಳ ಗಳಿಕೆ ರು. 6ರಿಂದ 7 ಸಾವಿರ ಇದ್ದಿರಲೇ ಬೇಕು. ಫಲಾನುಭವಿಗಳಿಗೆ ಉಚಿತವಾಗಿ ಮನೆ ನೀಡುತ್ತಿಲ್ಲ ಬದಲಾಗಿ ಪ್ರತಿ ಮನೆಗೆ ರು. 3.86 ಲಕ್ಷ ಅಂದಾಜು ಮಾಡಲಾಗಿದೆ. ಈ ಪೈಕಿ ಸರ್ಕಾರ ರು. 1.20 ಲಕ್ಷ ಸಬ್ಸಿಡಿ ನೀಡುತ್ತದೆ. ಬಾಕಿ ಮೊತ್ತವನ್ನು ಫಲಾನುಭವಿಗಳು ತುಂಬಲೇ ಬೇಕು. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಫಲಾನುಭವಿಗಳು ಡಿಪಾಸಿಟ್ ರೂಪದಲ್ಲಿ ರು. 30 ಸಾವಿರ ಮೊದಲು ಭರಣ ಮಾಡಬೇಕಾಗುತ್ತದೆ.
ಬ್ಯಾಂಕ್ ಸಾಲ...: ಬಾಕಿ ಉಳಿದ ಮೊತ್ತ ಭರಣ ಮಾಡಲು ಫಲಾನುಭವಿಗಳಿಗೆ ಬ್ಯಾಂಕ್ ಸಾಲ ನೀಡಲಾಗುತ್ತದೆ. ಫಲಾನುಭವಿಗೆ ಸಾಲ ನೀಡಬಹುದೋ ಇಲ್ಲವೋ ಎನ್ನುವ ಸಂಗತಿಯನ್ನು ಬ್ಯಾಂಕ್ ನಿರ್ಧರಿಸಲಿದೆ. ಜತೆಗೆ ಸಾಲ ನೀಡುವಾಗ ಫಲಾನುಭವಿಗೆ ಮಂಜೂರಾದ ಮನೆಯನ್ನೇ ಬ್ಯಾಂಕ್ ಭದ್ರತೆಯಾಗಿರಿಸಿಕೊಳ್ಳುತ್ತದೆ. ಒಂದು ವೇಳೆ ಸಾಲ ತುಂಬದೇ ಹೋದಲ್ಲಿ ಈ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಬ್ಯಾಂಕ್ ಹೊಂದಿರುತ್ತದೆ. ಫಲಾನುಭವಿ ಪ್ರತಿ ತಿಂಗಳು ಸರಿಸುಮಾರು ರು. 3ರಿಂದ 4 ಸಾವಿರದ ವರೆಗೆ ಬ್ಯಾಂಕ್ ಸಾಲವನ್ನು ಮರು ಪಾವತಿಮಾಡಬೇಕಾಗುತ್ತದೆ.  
ರು. 70-80 ಸಾವಿರ ಆದಾಯದವರಿಗೆ: ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ವರೆಗೆ ಅರ್ಜಿ ಪಡೆದುಕೊಂಡವರ ಪೈಕಿ ಅನೇಕರು ಆದಷ್ಟು ಕಡಿಮೆ ಆದಾಯ ತೋರಿಸಿದ್ದಾರೆ. ಅತಿ ಕಡಿಮೆ ಆದಾಯ ಹೊಂದಿದವರು ಮಾತ್ರ ಫಲಾನುಭವಿಗಳಾಗಿ ಆಯ್ಕೆಯಾಗುತ್ತಾರೆಂದು ಕೊಂಡು ಅನೇಕ ಮಂದಿ ರು. 11 ಸಾವಿರ ಆದಾಯ ಹೊಂದಿರುವ ಆದಾಯ ಪ್ರಮಾಣಪತ್ರ ಮಾಡಿಸಿಕೊಂಡಿದ್ದಾರೆ. ಆದರೆ ಈ ಯೋಜನೆಯಡಿಯಲ್ಲಿ ಮನೆ ಪಡೆಯಲು ಅರ್ಹರಾಗಬೇಕಾದರೆ ವಾರ್ಷಿಕ ಆದಾಯ ರು. 70ರಿಂದ ರು. 80 ಸಾವಿರ ಇರಲೇ ಬೇಕು. ಇಲ್ಲದೇ ಹೋದಲ್ಲಿ ಬ್ಯಾಂಕ್ ಸಹ ಸಾಲ ಕೊಡುವಲ್ಲಿ ಹಿಂದೇಟು ಹಾಕಲಿದೆ.
-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement