ನಿರಂತರ ನೀರಿಗೆ ಕೆಯುಡಿಎಫ್ಸಿ ಸಾಥ್
ಹುಬ್ಬಳ್ಳಿ: ಈಗಾಗಲೇ ಅವಳಿ ನಗರದಲ್ಲಿ ಆರಂಭವಾಗಿರುವ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಲಮಂಡಳಿಯಿಂದ ಕೆಲ ವಾರ್ಡ್ಗಳಲ್ಲಿ ಅನುಷ್ಠಾನಗೊಂಡಿದ್ದರೆ, ಇನ್ನುಳಿದ ವಾರ್ಡ್ಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕೆಯುಡಿಎಫ್ಸಿ ಪ್ರಸಕ್ತ ವರ್ಷದಿಂದ ಕೈಜೋಡಿಸಲಿದೆ.
ಎಲ್ಲವೂ ನಿಗದಿಯಂತೆ ನಡೆದಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡದ ಎಲ್ಲ ವಾರ್ಡ್ಗಳು ನಿರಂತರ ನೀರು ಪೂರೈಕೆ ಯೋಜನೆಗೊಳಪಡಲಿವೆ. ಅವಳಿ ನಗರದ ಒಟ್ಟು 41 ವಾರ್ಡ್ಗಳಲ್ಲಿ ವಿಶ್ವಬ್ಯಾಂಕ್ ನೆರವಿನ ರು. 1,146 ಕೋಟಿ ಮೊತ್ತದ ವೆಚ್ಚದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕಾಗಿ ಕರ್ನಾಟಕ ನಗರಾಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಡಿಎಫ್ಸಿ) ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಮುಂದಿನ ವಾರದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಯೋಜನೆ ಅನುಷ್ಠಾನಕ್ಕಾಗಿ ಅರ್ಹ ನಿರ್ವಾಹಕರಿಂದ (ರಿಕ್ವೆಸ್ಟ್ ಕ್ವಾಲಿಫಿಕೇಶನ್ ಆಫ್ ದಿ ಆಪರೇಟರ್) ಕೆಯುಡಿಎಫ್ಸಿ ಟೆಂಡರ್ ಕರೆಯಲಿದೆ. ಈಗಾಗಲೇ ಗುಲ್ಬರ್ಗ ಹಾಗೂ ಬೆಳಗಾವಿಯಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕಾಗಿ ಆರ್ಕ್ಯೂಒ ಟೆಂಡರ್ ಕರೆದಿದೆ.
ಟೆಂಡರ್ ಪ್ರಕ್ರಿಯೆ ಕೊನೆಗೊಂಡು, ಯೋಜನೆ ಅನುಷ್ಠಾನಕ್ಕೆ ಅರ್ಹ ಗುತ್ತಿಗೆದಾರರಿಗೆ ಒಂದು ವರ್ಷ ಕಾಲಾವಕಾಶ ದೊರೆಯಲಿದೆ. ಈ ಅವಧಿಯಲ್ಲಿ ಗುತ್ತಿಗೆದಾರರು ಯೋಜನೆಯ ನೀಲನಕ್ಷೆ ಮತ್ತಿತರ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ. ಗುತ್ತಿಗೆ ಪಡೆದ ಅವಧಿಯ ಒಂದೂವರೆ ವರ್ಷದ ನಂತರ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಮೂರು ವರ್ಷದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಷರತ್ತನ್ನು ಕೆಯುಡಿಎಫ್ಸಿ ವಿಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಹುಬ್ಬಳ್ಳಿಯ 4 ವಾರ್ಡ್ ಹಾಗೂ ಧಾರವಾಡದ 4 ವಾರ್ಡ್ ಸೇರಿದಂತೆ ಒಟ್ಟು 8 ವಾರ್ಡ್ಗಳು ನಿರಂತರ ನೀರು ಪೂರೈಕೆ ಯೋಜನೆಗೊಳಪಟ್ಟಿವೆ. ಇನ್ನೂ 18 ವಾರ್ಡ್ಗಳಲ್ಲಿ ಈ ಯೋಜನೆ ವಿಸ್ತರಣೆಗೆ ಜಲಮಂಡಳಿ ಈಗಾಗಲೇ ಕಾಮಗಾರಿ ಪ್ರಾರಂಭಿಸಿದ್ದು, ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಜಲಮಂಡಳಿ ವತಿಯಿಂದ ಕೈಗೊಳ್ಳುವ ನಿರಂತರ ನೀರು ಪೂರೈಕೆ ಯೋಜನೆ ವಿಸ್ತೀರ್ಣದ 18 ವಾರ್ಡ್ಗಳನ್ನು ಹೊರತುಪಡಿಸಿ ಇನ್ನುಳಿದ 41 ವಾರ್ಡ್ಗಳಲ್ಲಿ ಕೆಯುಡಿಎಫ್ಸಿ ಈ ಯೋಜನೆ ವಿಸ್ತೀರ್ಣದ ಜವಾಬ್ದಾರಿ ಹೊತ್ತುಕೊಂಡಿದೆ.
ಜಲಮಂಡಳಿ ಅವಳಿ ನಗರದ ವಿವಿಧೆಡೆ ಎರಡು ಹಂತದಲ್ಲಿ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಪ್ರಾರಂಭಿಸಿದೆ. ಮೊದಲ ಹಂತದ ರು. 71 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯ 66, 67, 47, 51, 52, 54, 55, 56 ವಾರ್ಡ್ಗಳಲ್ಲಿ ಭಾಗಶಃ ಹಾಗೂ 48, 34, 31 ವಾರ್ಡ್ಗಳಲ್ಲಿ ಸಂಪೂರ್ಣ ಮತ್ತು ಧಾರವಾಡದ 4, 14, 21, 7, 12, 13 ವಾರ್ಡ್ಗಳಲ್ಲಿ ಭಾಗಶಃ ಮತ್ತು 5, 16, 19 ವಾರ್ಡ್ಗಳಲ್ಲಿ ಸಂಪೂರ್ಣ ಪ್ರಮಾಣದಲ್ಲಿ ನಿರಂತರ ನೀರಿನ ಸೌಲಭ್ಯ ದೊರೆಯಲಿದೆ. ಎರಡನೇ ಹಂತದ ರು. 42.5 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ 30, 33, 31, 43, 44, 45, 46, 47, 53, 54, 55, 58, 59 ವಾರ್ಡ್ಗಳಲ್ಲಿ ಭಾಗಶಃ, ಧಾರವಾಡದ 2, 7, 11, 12, 13, 14, 17 ವಾರ್ಡ್ಗಳಲ್ಲಿ ಭಾಗಶಃ, 15ನೇ ವಾರ್ಡ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಗೊಳ್ಳಲಿದೆ. ಈಗಾಗಲೇ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಈ 18 ವಾರ್ಡ್ಗಳಲ್ಲಿ ಪ್ರಾರಂಭಗೊಂಡಿದ್ದು, ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಈ ವಾರ್ಡ್ಗಳನ್ನು ಹೊರತುಪಡಿಸಿ ಇನ್ನುಳಿದ ವಾರ್ಡ್ಗಳಲ್ಲಿ ಕೆಯುಡಿಎಫ್ಸಿ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಪ್ರಾರಂಭಿಸಲಿದೆ. ಯೋಜನೆ ಪೂರ್ಣಗೊಂಡ 8 ವರ್ಷದ ಅವಧಿಯನ್ನು ಕಾರ್ಯಾಚರಣೆ ಅವಧಿಯೆಂದು ಪರಿಗಣಿಸಲಾಗುತ್ತಿದ್ದು, ಈ ಅವಧಿಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೇ ನೀಡಲಾಗುವುದು. ಒಟ್ಟಿನಲ್ಲಿ ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಹುಬ್ಬಳ್ಳಿ-ಧಾರವಾಡದ ಎಲ್ಲ 67 ವಾರ್ಡ್ಗಳೂ ನಿರಂತರ ನೀರು ಪೂರೈಕೆ ಸೌಲಭ್ಯಕ್ಕೊಳಪಡಲಿವೆ.
-ವಿಶೇಷ ವರದಿ