ಕಾನೂನು ವಿದ್ಯಾರ್ಥಿಗಳಿಗೆ ಇತಿಹಾಸ ಮುಖ್ಯ
ಹುಬ್ಬಳ್ಳಿ: ಇತಿಹಾಸ ಕೇವಲ ಇತಿಹಾಸ ಕಲಿಯುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕಾನೂನು ಕಲಿಯುವ ವಿದ್ಯಾರ್ಥಿಗಳಿಗೂ ಕೂಡ ಅದು ಅಷ್ಟೇ ಮಹತ್ವದ ವಿಷಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸುರೇಂದ್ರಕುಮಾರ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಇತಿಹಾಸ ಮತ್ತು ಕಾನೂನು ಕುರಿತ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು. ಇತಿಹಾಸ ಬದಲಾವಣೆಗಳ ಗಾಥೆ, ಯಾವುದು ಬದಲಾಗುವುದಿಲ್ಲವೋ ಅದಕ್ಕೆ ಇತಿಹಾಸವಿಲ್ಲ. ಮಾನವನ ಪರಿಸರ, ಆತ ಕಟ್ಟಿದ ಸಮಾಜ, ಅದರೊಂದಿಗೆ ಆತನ ಸಂಬಂಧ, ಅವನ ಆರ್ಥಿಕ ನೆಲೆಗಟ್ಟು, ಸೃಷ್ಟಿಸಿದ ಸಿದ್ಧಾಂತಗಳೆಲ್ಲವೂ ಕಾಲಕಾಲಕ್ಕೆ ಬದಲಾಗುತ್ತ ಬಂದಿವೆ. ಅವುಗಳೇ ಇಂದಿನ ಸಾಮಾಜಿಕ ವ್ಯವಸ್ಥ್ನೆ, ಆರ್ಥಿಕತ್ನೆ, ನಾಗರಿಕತೆ ಮತ್ತು ಕಾನೂನು ಸೃಷ್ಟಿಸುವುದಕ್ಕೆ ಕಾರಣವಾಗಿವೆ ಎಂದರು.
ಇತಿಹಾಸ ಮತ್ತು ಕಾನೂನು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಕಾನೂನು ಕಲಿಕೆಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಇತಿಹಾಸ ಕಲಿಕೆ ಅಗತ್ಯ. ಹಲವಾರು ಪುಸ್ತಕಗಳಲ್ಲಿ ಸತ್ಯಕ್ಕೆ ದೂರವಿರುವ ಸಂಗತಿಗಳನ್ನ್ನು ಪ್ರಕಟಿಸಿರುವುದು ಉಂಟು ಎಂದು ಹೇಳಿದರು.
ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಟಿ.ಆರ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜಮುನಾ, ಡಾ. ಜಿ. ಬಿ. ಪಾಟೀಲ್ ವಂದಿಸಿದರು. ಕುಲಸಚಿವ ಡಾ. ಬಿ. ಎಸ್. ರೆಡ್ಡಿ, ಡೀನ್ ಪ್ರೊ. ಸಿ. ಎಸ್. ಪಾಟೀಲ, ಡಾ. ಜಿ. ಬಿ. ಪಾಟೀಲ ಇದ್ದರು. ಡಾ. ರತ್ನಾ ಭರಮಗೌಡರ್ ಪರಿಚಯಿಸಿ ಸ್ವಾಗತಿಸಿದರು.