ಕಾರು-ಲಾರಿ ಡಿಕ್ಕಿ: ರಷ್ಯಾ ಪ್ರವಾಸಿ ಸಾವು
ಧಾರವಾಡ: ತಾಲೂಕಿನ ಮುಗದ ಬಳಿ ಗೋವಾ ರಸ್ತೆಯಲ್ಲಿ ಲಾರಿ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ರಷ್ಯಾ ದೇಶದ ಮಹಿಳಾ ಪ್ರವಾಸಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಕಾರಿನಲ್ಲಿದ್ದ ಇನ್ನುಳಿದ ಐದು ಜನ ರಷ್ಯಾ ಪ್ರವಾಸಿಗರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಗೋವಾದಿಂದ ಕೊಪ್ಪಳದ ವಿರೂಪಾಪುರಗಡ್ಡಿಗೆ ಹೊರಟಿದ್ದ ಕಾರು ಮುಗದ ಬಳಿ ಕ್ರಾಸ್ವೊಂದರಲ್ಲಿ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಗೋರ್ ಸಿಂದ್ರೋವ್ (26) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಕೆಯ ಪತಿ ಅಂತೋಲಿ ಸಿಂದ್ರೋವ್ (54) ಹಾಗೂ ಮ್ಯಾಕ್ಸಿಮ್ (32), ವಲಾಂತಿಯಾ ಸಿಂದ್ರೋವ್ (50), ಮಥಿಲಿನಾ (26) ಹಾಗೂ ಯುಲಾಕ್ (26) ಗಾಯಗೊಂಡಿದ್ದು, ಸಿವಿಲ್ ಆಸ್ಪತ್ರೆ ಹಾಗೂ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡವರೆಲ್ಲರೂ ರಷ್ಯಾ ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡದ ಕಾರಣ ಅವರ ಹೆಸರು, ವಿಳಾಸ ಪಡೆಯಲು ಪೊಲೀಸರು ಪರದಾಡಬೇಕಾಯಿತು. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮಹಿಂದ್ರಾ ಕಂಪನಿ ಜಾಯಿಲೋ ಕಾರು ನಜ್ಜುಗುಜ್ಜಾಗಿದೆ. ಗ್ರಾಮೀಣ ಠಾಣೆ ಪೊಲೀಸರು ಲಾರಿ ವಶಪಡಿಸಿಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.