ಸಭೆಗೆ ಬಾರದ ಸಚಿವ ದಿನೇಶ ಗುಂಡೂರಾವ್
ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿಗಳ ಸಭೆ ನಡೆಸುವುದಾಗಿ ಹೇಳಿ ಬರೋಬ್ಬರಿ ಎರಡು ಗಂಟೆಗೂ ಕಾಲ ಎಲ್ಲರನ್ನೂ ಕಾಯಿಸಿ ಸಭೆಗೆ ಬಾರದೇ ಬೆಂಗಳೂರಿಗೆ ವಾಪಾಸಾದ ಘಟನೆ ಶನಿವಾರ ಸಂಜೆ ನಡೆದಿದೆ.
ನಿಗದಿಯಂತೆ ಸಚಿವ ಗುಂಡೂರಾವ್, 6 ಗಂಟೆಗೆ ಪಾಲಿಕೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ಬರುವಿಕೆಗಾಗಿ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಕಾದು ಕುಳಿತಿದ್ದರು. ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆಸಲು ಹೋಗಿದ್ದ ಸಚಿವರು ಈಗ ಬರುತ್ತಾರೆ, ಆಗ ಬರುತ್ತಾರೆಂದು ಕಾದು ಕುಳಿತರೂ ಸಚಿವರ ಪತ್ತೆಯೇ ಇಲ್ಲ. ಎಂಟು ಗಂಟೆಯ ಹೊತ್ತಿಗೆ ಸಚಿವರು ಸಭೆ ಬರುವುದಿಲ್ಲ ಅವರು ನೇರವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ ಎಂದು ಸಂದೇಶ ಬಂದಾಗ ಅಧಿಕಾರಿಗಳು ಮನೆಯತ್ತ ಮುಖ ಮಾಡಿದರು.