ಅನುಪಯುಕ್ತ ಆಹಾರ ಪದ್ಧತಿ ಆರೋಗ್ಯಕ್ಕೆ ಮಾರಕ
ಧಾರವಾಡ: ಆಕರ್ಷಕ ಮತ್ತು ಅನುಪಯುಕ್ತ ಆಹಾರ ಪದ್ಧತಿಯ ಬೆನ್ನು ಬಿದ್ದಿರುವ ಭಾರತದ ಯುವ ಜನಾಂಗ ಅನಾರೋಗ್ಯದ ಹಾದಿ ಹಿಡಿಯುತ್ತಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ನಿವೃತ್ತ ಯೋಜನಾ ಸಂಯೋಜಕ ಡಾ.ಎ. ಸೀತಾರಾಮ ಹೇಳಿದರು.
ಇಲ್ಲಿಯ ಲಿಂಗಾಯತ ಟೌನ್ಹಾಲ್ನಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳ ಮೇಳವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನೀಕರಣ ಹಾಗೂ ಇಳುವರಿಯ ಹಿಂದೆ ಬಿದ್ದ ರೈತ ಇಂದು ಪೌಷ್ಟಿಕಾಂಶಯುಕ್ತ ಕಿರುಧಾನ್ಯ ಬೆಳೆಯ ಬಗ್ಗೆ ಅಸಡ್ಡೆ ಭಾವನೆ ತಳೆದು, ಆರೋಗ್ಯಕ್ಕೆ ಮಾರಕವಾಗುವ ಬೆಳೆಗಳನ್ನು ಬೆಳೆಯುತ್ತಿದ್ದಾನೆ. ಇದರಿಂದಾಗಿ ಮಾನವನ ದೇಹ ರೋಗಗಳ ತಾಣವಾಗಿದೆ. ಶೇ. 45ರಷ್ಟು ಮಕ್ಕಳು ವಯೋವಾನಕ್ಕೆ ತಕ್ಕಂತೆ ತೂಕವಿಲ್ಲದೆ ಬಳಲುತ್ತಿದ್ದರೆ, ಶೇ. 50ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಹಿರಿಯರು ಬೆಳೆಯುತ್ತಿದ್ದ ಜವಾರಿ ತಳಿ ಬೆಳೆಗಳ ಮೇಲೆ ಈಗಿನ ರೈತರಿಗೆ ವ್ಯಾಪಾರೀಕರಣದಿಂದಾಗಿ ನಂಬಿಕೆ ಇಲ್ಲದಂತಾಗಿದೆ. ಈ ಕಾರಣದಿಂದಾಗಿ ಸರ್ಕಾರ ರು. 300 ಕೋಟಿ ಹಣವನ್ನು ವ್ಯಯ ಮಾಡಿ ಕಿರು ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ. ಎಸ್.ಎಂ. ಗಡಾದ ಮಾತನಾಡಿ, ಎಲ್ಲ ರಂಗದಲ್ಲೂ ಗಣನೀಯ ಸಾಧನೆ ಮಾಡಿದ ಮಾನವ, ತಾನು ಸೇವಿಸುವ ಆಹಾರದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ. ಇಂದಿನ ಯುವ ಜನಾಂಗ ಆಕರ್ಷಣೆಗೆ ಒಳಪಡುತ್ತಿದೆಯೇ ಹೊರತು ಆಹಾರದಲ್ಲಿನ ಪೌಷ್ಟಿಕಾಂಶಗಳ ಬಗ್ಗೆ ವಿಚಾರಿಸುತ್ತಿಲ್ಲ. ಅಕ್ಕಿಯೊಂದಿಗೆ ನಮ್ಮ ಬದುಕು ಹೀಗೆ ಮುಂದುವರೆದರೆ ನಾವು ನೂರಾರು ರೋಗಗಳ ಒಡೆಯರಾಗಿ ಮಾನವನ ಆಯುಷ್ಯನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತೇವೆ. ಚೀನಾದ ಜಂಕ್ ಫುಡ್ಗಳು ಆ ದೇಶದಲ್ಲಿನ ವಸ್ತುಗಳಂತೆ ಒಂದು ಸಲ ಉಪಯೋಗಿಸಿ ಬಿಡುವಂತಹವು. ಅವುಗಳನ್ನು ತಿಂದರೆ ಚೀನಾದ ವಸ್ತುಗಳಂತೆ ಸ್ವಲ್ಪ ದಿನ ಬಾಳಿಕೆಗೆ ಬರುತ್ತೇವೆ. ಆದ್ದರಿಂದ ವೇದ ಕಾಲದಿಂದಲೂ ಬಳಸುತ್ತಿರುವ ಕಿರುಧಾನ್ಯಗಳನ್ನು ಮತ್ತೇ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಅಗತ್ಯವಿದೆ. ಎಲ್ಲ ಋತುಗಳಲ್ಲೂ, ಎಲ್ಲ ಸ್ಥಳದಲ್ಲಿಯೂ ಬೆಳೆಯಬಹುದಾದ ಸಂಪೂರ್ಣ ಆರೋಗ್ಯ ಹೊಂದಿದ ಈ ಕಿರುಧಾನ್ಯಗಳನ್ನು ಎಲ್ಲರೂ ಉಪಯೋಗಿಸಲು ಪ್ರಾರಂಭಿಸಿದರೆ ನಮ್ಮ ದೇಶ ಆರೋಗ್ಯ ಮುಕ್ತವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜೋಳದ ಬೆಳೆಯ ಬೇಸಾಯ, ಸಂಸ್ಕರಣೆ ಹಾಗೂ ಮೌಲ್ಯ ವರ್ಧನೆ ಮತ್ತು ನವಣೆ ಬೆಳೆಯ ಬೇಸಾಯ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಎಂಬ ಎರಡು ಪುಸ್ತಕಗಳನ್ನು ಬಿಡುಗೊಡೆಗೊಳಿಸಲಾಯಿತು. ಸಿರಿ ಧಾನ್ಯ ಬೆಳೆಗಳಾದ ಸಾವೆ, ಜೋಳ, ನವಣೆ, ರಾಗಿ, ಸಜ್ಜೆ, ಹಾರಕ, ಊದಲು, ಕೆಂಪು ಅಕ್ಕಿಗಳ ಹಾಗೂ ನಾಟಿ, ಜವಾರಿ ಬೀಜಗಳ ಪ್ರಾತ್ಯಕ್ಷಿಕೆ ನಡೆಯಿತು. ಪ್ರಾಧ್ಯಾಪಕ ಡಾ. ಸುನಂದಾ ಶರಣ, ವ್ಯವಸ್ಥಾಪಕ ಮಂಡಳಿ ಸದಸ್ಯ ಡಾ. ವೈ.ಬಿ. ಪಾಟೀಲ, ಹೇಮಾಕ್ಷಿ ಕಿರೇಸೂರ, ವಿಸ್ತರಣಾ ನಿರ್ದೇಶಕ ಎಂ.ಬಿ. ಚೆಟ್ಟಿ ಇದ್ದರು.