ಚಕ್ಕಡಿಯಲ್ಲಿ 'ಬಾಲು ಸರ್' ಮೆರವಣಿಗೆ
ಧಾರವಾಡ: ನೆಚ್ಚಿನ ಶಿಷ್ಯ ಬಳಗದ ಒತ್ತಾಯಕ್ಕೆ ಮಣಿದ ಬಾಲಸುಬ್ರಹ್ಮಣ್ಯ ಅವರು ಪ್ರಥಮ ಬಾರಿಗೆ ಧಾರವಾಡ ಪಟಗಾ ಸುತ್ತಿ ಚಕ್ಕಡಿಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಮೆರವಣಿಗೆ ಹೊರಟಾಗ ಅವರ ಮುಖದಲ್ಲಿ ಸಂತೃಪ್ತಿಯ ಭಾವ. ಫೆ. 28ರಂದು ಸೇವಾ ನಿವೃತ್ತಿ ಹೊಂದಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿಭಾಗದ ಮುಖ್ಯಸ್ಥ ಡಾ ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಗುರುವಂದನಾ ಕಾರ್ಯಕ್ರಮದ ಅಂಗವಾಗಿ 'ಬಾಲು ಸರ್' ಅವರನ್ನು ಅವರ ಮನೆಯಿಂದ ಚಕ್ಕಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಹಳೆ ವಿದ್ಯಾರ್ಥಿಗಳು ಡೊಳ್ಳು-ನಗಾರಿಗಳನ್ನು ಬಾರಿಸುತ್ತ ನೆಚ್ಚಿನ ಗುರುಗಳಿಗೆ ದೇಸಿ ಶೈಲಿಯಲ್ಲಿ ಗೌರವ ಸಲ್ಲಿಸಿದರು.
31 ವರ್ಷಗಳ ಸೇವೆಯಲ್ಲಿ ವಿದ್ಯಾರ್ಥಿಗಳನ್ನು ಬೈಯ್ದಿದ್ದೇನೆ. ಈಗ ಬೀಳ್ಕೊಡುಗೆ ಸಮಾರಂಭದಲ್ಲೂ ಈ ರೀತಿಯ ಸನ್ಮಾನ, ಚಕ್ಕಡಿ ಏರಿ ಮೆರವಣಿಗೆ ಮಾಡಿಸಿಕೊಳ್ಳುವುದು ಬೇಡ ಎಂದರೆ ತಪ್ಪಾಗುತ್ತದೆ ಎಂದು ಹಳೆಯ ವಿದ್ಯಾರ್ಥಿಗಳು ಮಾಡುವ ಎಲ್ಲ ಗೌರವಗಳಿಗೂ ಸುಮ್ಮನಾಗಿದ್ದೇನೆ ಎಂದು ಪ್ರೀತಿಯಿಂದ ಬಾಲು ಸರ್ ವಿದ್ಯಾರ್ಥಿಗಳ ಗೌರವ ಸ್ವೀಕರಿಸಿದರು. ವಿಚಾರ ಸಂಕಿರಣ ಹಾಗೂ ಗುರುವಂದನೆ ಸಮಾರಂಭದ ನಂತರ ನಡೆದ ಸಂವಾದದಲ್ಲಿ ಬಾಲಸುಬ್ರಹ್ಮಣ್ಯ ಕುರಿತಾಗಿ ಹಿರಿಯ ವಿದ್ಯಾರ್ಥಿಗಳು ಮಾತನಾಡಿದರು. ಬಾಲು ಸರ್ ಅಂದು ತಿದ್ದಿ, ಬುದ್ಧಿವಾದ ಹೇಳಿ ಧೈರ್ಯ ತುಂಬಿದ ಕಾರಣ ನಾನು ಇಂದು ಮೈಸೂರು ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಪ್ರಮೀಳಾ ಕುನ್ನೂರ ಹೇಳಿದರು. ಬಂಡು ಕುಲಕರ್ಣಿ, ವಸಂತ ಭಟ್ಟ ಮತ್ತಿತರರು ಹಳೆ ನೆನಪುಗಳನ್ನು ಮೆಲುಕು ಹಾಕಿದರು. ತದನಂತರ ಹಳೆ ವಿದ್ಯಾರ್ಥಿಗಳ ಸಭೆ ನಡೆಯಿತು. ಪತ್ರಕರ್ತ ಬಸವರಾಜ ಹೊಂಗಲ ನಿರ್ದೇಶನದಲ್ಲಿ ಕೊನೆ ನಮಸ್ಕಾರ ನಾಟಕ ಪ್ರದರ್ಶನವೂ ನಡೆಯಿತು.