ವಿದ್ಯಾನಗರಿಯಲ್ಲಿ ಜಾಗೃತಗೊಂಡ ಆರ್ಟಿಇ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 23
ವಿದ್ಯಾನಗರಿ ಖ್ಯಾತಿ ಧಾರವಾಡದಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್ಟಿಇ) ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದನ್ನು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರವೇಶ ಕೋರಿ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ನೋಡಿ ತಿಳಿಯಬಹುದು.
ಕಳೆದ ಬಾರಿ ತಿಳಿವಳಿಕೆ ಹಾಗೂ ಜಾಗೃತಿ ಕೊರತೆಯಿಂದ ಆರ್ಟಿಇ ಕಾಯ್ದೆ ಅಡಿ ಪ್ರವೇಶಕ್ಕೆ ಸ್ಪರ್ಧಾತ್ಮಕ ಅರ್ಜಿಗಳು ಬಂದಿರಲಿಲ್ಲ. ಆದರೆ, ಪ್ರಸಕ್ತ ವರ್ಷ ನಿರಂತರ ಜಾಗೃತಿ ಫಲವಾಗಿ ನಿಗದಿ ಪಡಿಸಿದ ಸೀಟುಗಳಿಗಿಂತ ಹಲವು ಪಟ್ಟು ಹೆಚ್ಚು ಅರ್ಜಿಗಳು ಆಯಾ ಶಾಲೆಗಳಿಗೆ ತಲುಪಿವೆ. ಅದರಲ್ಲೂ ಧಾರವಾಡದ ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ನಿರೀಕ್ಷೆ ಮೀರಿ ಅರ್ಜಿಗಳು ಬಂದಿವೆ. ಕಳೆದ ಫೆ. 19ರಂದು ಕಾಯ್ದೆ ಅಡಿ ಪ್ರವೇಶ ಕೋರಿ ಪ. ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗಗಳ ಪಾಲಕರು ಅರ್ಜಿ ಸಲ್ಲಿಸಿದ್ದು, ಈಗಾಗಲೇ ಅರ್ಜಿಗಳ ಪರಿಶೀಲನೆ ಜೋರು ಪಡೆದುಕೊಂಡಿದೆ.
ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾಯ್ದೆ ಅಡಿ ಪ್ರವೇಶ ನೀಡುವ ಪೂರ್ವ ಪ್ರಾಥಮಿಕ ಶಾಲೆಗಳಿಂದ ಅರ್ಜಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೇ, ಶಾಲೆಗಳ ಸಿಬ್ಬಂದಿ ಸಹಾಯದಿಂದ ಬಂದ ಸಾವಿರಾರು ಅರ್ಜಿಗಳನ್ನು ವರ್ಗವಾರು, ಜಾತಿವಾರು ಹಾಗೂ ಆದಾಯ ಕುರಿತಂತೆ ವಿಂಗಡಿಸಲಾಗಿದೆ.
ಲಾಟರಿ ಮೂಲಕ ಆಯ್ಕೆಗೆ ತೀರ್ಮಾನ: ಎಲ್ಕೆಜಿ ಪ್ರವೇಶಕ್ಕೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 702 ಸೀಟುಗಳು ಲಭ್ಯವಿದ್ದರೆ, ಬಂದಿರುವ ಅರ್ಜಿಗಳ ಸಂಖ್ಯೆ 2,868. ಹಾಗೆಯೇ, 1ನೇ ತರಗತಿಗೆ 2,043 ಸೀಟುಗಳನ್ನು ನಿಗದಿಪಡಿಸಿದ್ದರೆ ಬಂದಿರುವ ಅರ್ಜಿಗಳ ಸಂಖ್ಯೆ 4,982. ನಿಗದಿತ ಸೀಟುಗಳಿಗಿಂತ ಹೆಚ್ಚು ಅರ್ಜಿಗಳು ಬಂದ ಕಾರಣ ಆಯಾ ಶಾಲೆಗಳಲ್ಲಿ ಪಾಲಕರ ಸಭೆ ಕರೆದು ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚೀಟಿ ಎತ್ತುವ (ಲಾಟರಿ) ಮೂಲಕ ಪಾರದರ್ಶಕವಾಗಿ ಮಕ್ಕಳನ್ನು ಆಯ್ಕೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ 'ಕನ್ನಡಪ್ರಭ'ಕ್ಕೆ ತಿಳಿಸಿದರು. ವಿಶೇಷವಾಗಿ ಅನಾಥ ಮಗು, ಬೀದಿ ಮಗು, ವಿಕಲಚೇತನ ಅಥವಾ ವಿಶೇಷ ಅಗತ್ಯತೆಯುಳ್ಳ ಮಗು, ಎಚ್ಐವಿ ಪೀಡಿತ ಮಕ್ಕಳಿಗೆ ಅಲ್ಲದೇ, ಆದಾಯ ರು. 1 ಲಕ್ಷಕ್ಕಿಂತ ಕಡಿಮೆ ಇರುವ ಅರ್ಜಿಗಳಲ್ಲಿ ಅತೀ ಕಡಿಮೆ ಆದಾಯ ಹೊಂದಿದ ಅರ್ಜಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು. ಶಾಲೆಯಲ್ಲಿ ಪ್ರವೇಶ ಪಡೆಯುವ ಶೇ. 25ರಷ್ಟು ಪ್ರವೇಶ ಈ ಕಾಯ್ದೆ ಅಡಿಯಲ್ಲಿ ಸಂಬಂಧಿಸಿದ ಶಾಲೆಗಳು ಕೊಡಲೇಬೇಕು. ಎಲ್ಲ ಪ್ರಕ್ರಿಯೆ ನಂತರ ಮಾ. 3ರಿಂದ ಪ್ರವೇಶ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ಡಾ. ವರ್ಧನ್ ಮಾಹಿತಿ ನೀಡಿದರು.
ಬೇಡಿಕೆ ಶಾಲೆಗಳಿವು: ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಧಾರವಾಡ ನಗರದಲ್ಲಿ ಪ್ರತಿಷ್ಠಿತ ಶಾಲೆಗಳು ಇರುವ ಕಾರಣ ತುಸು ಬೇಡಿಕೆ ಹೆಚ್ಚಾಗಿದೆ. ಎಲ್ ಕೆಜಿಗೆ 9 ಶಾಲೆಗಳನ್ನು ನಿಗದಿ ಪಡಿಸಲಾಗಿದ್ದು, 184 ಸೀಟುಗಳಿಗೆ 1,353 ಅರ್ಜಿಗಳು ಬಂದಿವೆ. 1ನೇ ತರಗತಿಯ 36 ಶಾಲೆಗಳಿಗೆ 319 ಸೀಟುಗಳಿಗೆ 1,303 ಅರ್ಜಿಗಳು ಬಂದಿವೆ. ಈ ಪೈಕಿ ಎಸ್ ಡಿಎಂ ಕೇಂದ್ರ ಶಾಲೆಗೆ 75 ಸೀಟುಗಳಿಗೆ 477, ಕೆಲಗೇರಿಯ ಜೆಎಸ್ಸೆಸ್ ಸಿಬಿಎಸ್ಸಿ ಶಾಲೆಗೆ 11 ಸೀಟುಗಳಿಗೆ 92, ಕೆಪಿಎಸ್ಸಿ ಆಂಗ್ಲ ಮಾಧ್ಯಮ ಶಾಲೆಯ 25 ಸೀಟುಗಳಿಗೆ 252 ಹೀಗೆ ಮಲ್ಲಸಜ್ಜನ ವ್ಯಾಯಾಮ ಶಾಲೆ, ರಾಜೀವಗಾಂಧಿ ಕೇಂದ್ರೀಯ ಶಾಲೆಗಳಿಗೆ ನಿಗದಿತ ಸೀಟುಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದಿವೆ ಎಂದು ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದಮನಿ ಪತ್ರಿಕೆಗೆ ಅಂಕಿ-ಅಂಶಗಳ ಮೂಲಕ ತಿಳಿಸಿದರು. ಒಟ್ಟಿನಲ್ಲಿ ಸಾರ್ವಜನಿಕರಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕಿನ ಬಗ್ಗೆ ತಿಳಿವಳಿಕೆ ಬಂದಿದ್ದು, ಪಾರದರ್ಶಕವಾಗಿ ಮಕ್ಕಳ ಆಯ್ಕೆಯಾದರೆ ಬಡ ಹಾಗೂ ಹಿಂದುಳಿದ ಜನರೂ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸಬೇಕೆಂಬ ಕನಸು ನನಸಾಗಲಿದೆ.
ಇಂದು ಆಯ್ಕೆ ಪಕ್ರಿಯೆ
ಧಾರವಾಡ: ಕಡ್ಡಾಯ ಶಿಕ್ಷಣ ಕಾಯ್ದೆಗೆ ಒಳಪಟ್ಟ ಧಾರವಾಡ ನಗರದ ಶಾಲೆಗಳಲ್ಲಿ ಆಯ್ಕೆ ಪ್ರಕ್ರಿಯೆಯು ಫೆ. 24ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಮಕ್ಕಳ ಪ್ರವೇಶಕ್ಕೆ ಅರ್ಜಿ ಹಾಕಿದ ಪಾಲಕರು ಆಯಾ ಶಾಲೆಗಳಲ್ಲಿ ಭಾಗವಹಿಸಬೇಕೆಂದು ಶಹರ ವಲಯ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಬಸವರಾಜ ಹಿರೇಮಠ