ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿದ್ಯಾರ್ಥಿಗಳ ಈ ಪ್ರೀತಿಗೆ ಚಿರಋಣಿ

Vishwanath S
Updated On : 24 Feb 2014, 11:07 am

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 23
31 ವರ್ಷಗಳ ನನ್ನ ಬೋಧಕ ವೃತ್ತಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರ ಬೆಳವಣಿಗೆಗೆ ನೀರೆರೆದಿದ್ದು ಸಮಾಧಾನ ತಂದಿದೆ. ನಾನು ಕಲಿಸಿದ ಪಾಠಕ್ಕೆ ಗುರುವಂದನೆ ಮೂಲಕ ವಿದ್ಯಾರ್ಥಿಗಳು ತೋರಿಸಿದ ಈ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ...
ಮೂರು ದಶಕಗಳಿಂದ ಹಲವಾರು ವಿದ್ಯಾರ್ಥಿಗಳನ್ನು ಪತ್ರಕರ್ತರನ್ನಾಗಿ ರೂಪಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ೤ ಎ.ಎಸ್. ಬಾಲಸುಬ್ರಹ್ಮಣ್ಯ ಫೆ. 28ರಂದು ಸೇವಾ ನಿವೃತ್ತಿ ಹೊಂದಲಿದ್ದು, ಶಿಷ್ಯರ ಪ್ರೀತಿಯ ಗುರುವಂದನೆ ಸ್ವೀಕರಿಸಿ, ಭಾವುಕರಾಗಿ ಆಡಿದ ನುಡಿಗಳಿವು.
ಕರ್ನಾಟಕ ವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ ನಡೆದ ಭಾನುವಾರ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿ ಪತ್ರಕರ್ತರ, ಕುಟುಂಬದ, ಸಂಬಂಧಿಕರ ಹಾಗೂ ಅತಿಥಿಗಳ ಸಮ್ಮುಖದಲ್ಲಿ ಡಾ೤ ಎ.ಎಸ್. ಬಾಲಸುಬ್ರಹ್ಮಣ್ಯ ಹಾಗೂ ಅವರ ಧರ್ಮಪತ್ನಿ ಕೆ.ವಿ. ಲತಾ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸೇವೆಗೆಂದು ದೂರದ ಮೈಸೂರಿನಿಂದ ಧಾರವಾಡಕ್ಕೆ ಬಂದಾಗ ಒಂದು ರೀತಿಯ ಭಯವಿತ್ತು. ಇಲ್ಲಿಯ ಜನರ ಪರಿಚಯವೇ ಇರಲಿಲ್ಲ. ಆದರೆ, ಈಗ ಹೃದಯ ಶ್ರೀಮಂತಿಕೆಯ ಧಾರವಾಡದ ಮಂದಿಯೇ ನನಗೆಲ್ಲ. ಇಲ್ಲಿಯೇ ಹುಟ್ಟಿ ಬೆಳದವನಷ್ಟು ಧಾರವಾಡಕ್ಕೆ ಪರಿಚಿತನಾಗಿದ್ದೇನೆ. ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರಬೇಕೆಂಬ ಒಂದೇ ಆಶಯದಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಬೈದು ಬುದ್ಧಿ ಹೇಳಿದ್ದೇನೆ. ಆದರೂ ಪ್ರೀತಿಯಿಂದ ಆತ್ಮೀಯವಾಗಿ ಮಾತನಾಡುವ ವಿದ್ಯಾರ್ಥಿಗಳು ಹಾಗೂ ಧಾರವಾಡದ ಮಂದಿಗೆ ನಾನು ಚಿರಋಣಿ ಎಂದು ಪ್ರೊ೤ ಬಾಲಸುಬ್ರಹ್ಮಣ್ಯ ಹೇಳಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ ಅಮೀನಮಟ್ಟು, ಒಂದು ಕಾಲದಲ್ಲಿ ಆದರ್ಶವಾಗಿದ್ದ ಪತ್ರಿಕೋದ್ಯಮ ವೃತ್ತಿ ಇದೀಗ ಮುಂಚಿನ ಆದರ್ಶ, ಮೌಲ್ಯಗಳು ಉಳಿಸಿಕೊಂಡಿಲ್ಲ. ಮಾಧ್ಯಮ ವೃತ್ತಿ ಉದ್ಯಮಿಗಳ ಕೈ ಸೇರುತ್ತಿದೆ. ಪತ್ರಿಕೆ ಮಾಲೀಕತ್ವವೂ ದುಡ್ಡಿದ್ದವರ ಪಾಲಾಗುತ್ತಿದೆ. ಮಾಧ್ಯಮ ವೃತ್ತಿ ಮುಂಚಿನಂತೆ ವಿಶ್ವಾರ್ಹತೆ ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇದು ಕನ್ನಡದ ಪತ್ರಿಕೋದ್ಯಮದ ದೊಡ್ಡ ದುರಂತ ಎಂದರು.
ಅಭಿನಂದನಾ ಗ್ರಂಥ ಬಿಡುಗಡೆ: ಕರ್ನಾಟಕ ವಿವಿಯ ಕುಲಪತಿ ಪ್ರೊ೤ ಎಚ್.ಬಿ. ವಾಲೀಕಾರ 'ಮಾಧ್ಯಮ ಮನ್ವಂತರ' ಅಭಿನಂದನ ಗ್ರಂಥ ಬಿಡುಗಡೆ ಮಾಡಿ, ನಾವಿಬ್ಬರೂ ಸೇವೆಗೆ ಸೇರಿದಾಗಿನಿಂದ ಶ್ರಮ ಸಂಸ್ಕೃತಿಯ ಸ್ಪರ್ಧಿಗಳು. ತಪ್ಪು ಮಾಡಿದರೂ ಬಾಲಸುಬ್ರಹ್ಮಣ್ಯ ತಮ್ಮ ಶಿಷ್ಯರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಇಷ್ಟು ದೊಡ್ಡ ಶಿಷ್ಯವರ್ಗವನ್ನು ಅವರು ಬೆಳೆಸಿದ್ದು ಸಂತಸ ತಂದಿದೆ. ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಶಿಕ್ಷಕರ ಕೊರತೆಯಿದ್ದು, ನಿವೃತ್ತಿಯಾಗುತ್ತಿರುವ ಬಾಲಸುಬ್ರಹ್ಮಣ್ಯ ಅವರ ಸೇವೆಯನ್ನೂ ವಿವಿ ಇನ್ನೂ ಬಯಸುತ್ತದೆ. ಅವರು ಇಚ್ಛಿಸಿದಲ್ಲಿ ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳುತ್ತೇನೆ. ಈ ಮೂಲಕ ಅವರ ಸೇವೆ ಇನ್ನೂ ಮುಂದುವರೆಯಲಿ ಎಂದು ಹಾರೈಸಿದರು. ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ಕಂಬಿ ಪ್ರಾಸ್ತಾವಿಕ ಮಾತನಾಡಿದರು. ವಿಜಯ ಕರ್ನಾಟಕದ ಸಂಪಾದಕ ಸುಗತ ಶ್ರೀನಿವಾಸರಾಜು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ, ಡಾ೤ ಓಂಕಾರ ಕಾಕಡೆ, ಎಂ.ಎಂ. ಪಾಟೀಲ, ಡಾ೤ ಜೆ.ಎಂ. ಚಂದೂನವರ ಇದ್ದರು. ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement