ಕಲೆ, ಸಾಹಿತ್ಯದ ರಕ್ಷಣೆ ಇಂದಿನ ಅಗತ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 24
ಕಲೆ ಸಾಹಿತ್ಯ ಹಾಗೂ ಸೌಹಾರ್ದತೆ ಉಳಿಸಿ ಬೆಳೆಸುವುದು ಇಂದಿನ ಅಗತ್ಯ. ಇದು ಜನರ ಸಾಂಸ್ಕೃತಿಕ ಪ್ರಜ್ಞೆಯ ಉನ್ನತೀಕರಣದಿಂದ ಮಾತ್ರ ಸಾಧ್ಯ ಎಂದು ಪತ್ರಕರ್ತ ಸನತ್ಕುಮಾರ ಬೆಳಗಲಿ ಹೇಳಿದರು.
ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿವೈಒ ಹಾಗೂ ಎಐಡಿಎಸ್ಒ ಸಂಘಟನೆಗಳ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ 11ನೇ ವರ್ಷದ ಧಾರವಾಡ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಕಲೆಗಳು ಯಾವಾಗಲೂ ಮನಸ್ಸನ್ನು ವಿಕಾಸಗೊಳಿಸುವಂತೆ ರೂಪುಗೊಳ್ಳಬೇಕು. ಆದರೆ ಇಂದು ಭಾರತದ ಬಹುಮುಖಿ ಸಂಸ್ಕೃತಿಯನ್ನು ಹೊಸಕಿ ಹಾಕಿ ಏಕಧರ್ಮದ ಸೂತ್ರದಡಿ ಇಡೀ ದೇಶವನ್ನು ತರುವ ಹುನ್ನಾರ ನಡೆದಿದೆ. ಸಾಹಿತ್ಯ, ಕಲೆಗಳ ವ್ಯಾಪಾರೀಕರಣದಿಂದಾಗಿ ಮಾರುಕಟ್ಟೆ ಸರಕಾಗಿ ಪರಿಣಮಿಸಿವೆ. ಪ್ರಚಾರದ ಮುಖಾಂತರ ಓರ್ವ ವ್ಯಕ್ತಿಯನ್ನು ಈ ದೇಶವನ್ನು ಉದ್ಧರಿಸುವ ಅವತಾರಿ ಪುರುಷನಂತೆ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು. ಹಿರಿಯ ಸಿತಾರ್ ವಾದಕ ಉಸ್ತಾದ್ ಹಮೀದ್ಖಾನ್ ಮತ್ತು ಸಂಘಟನಾಕಾರ ಗಂಗಾಧರ ಬಡಿಗೇರ ಭಾಗವಹಿಸಿದ್ದರು. ಎಐಡಿಎಸ್ಒ ಜಿಲ್ಲಾಧ್ಯಕ್ಷ ಶರಣಬಸವ ಗೋನವಾರ ಅಧ್ಯಕ್ಷತೆ ವಹಿಸಿದ್ದರು.
ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗಗೀತೆಗಳನ್ನು ಹಾಡುವುದರ ಮೂಲಕ ಧಾರವಾಡ ಆವಿಷ್ಕಾರ ತಂಡದವರು ಚಾಲನೆ ನೀಡಿದರು. ಬಾದಲ್ ಸರ್ಕಾರ ವಿರಚಿತ ಮೋಜಿನ ಸೀಮೆಯಾಚೆ ಒಂದೂರು ನಾಟಕವನ್ನು ಬೆಂಗಳೂರು ಆವಿಷ್ಕಾರ ತಂಡದವರು ಪ್ರದರ್ಶಿಸಿದರು. ಅಂಕುರ ಸಾಂಸ್ಕೃತಿಕ ವೇದಿಕೆಯಿಂದ ಡಾ. ಸುಧಾ ಕಾಮತ್ ರಚಿಸಿ, ಲಕ್ಷ್ಮಣ ಪೀರಗಾರ ನಿರ್ದೇಶಿಸಿದ 'ಕೊಲ್ಲದಿರಿ ನನ್ನ ಕಣ್ತೆರೆಯುವ ಮುನ್ನ' ಕಿರು ನಾಟಕ ಪ್ರದರ್ಶನ ನಡೆಯಿತು.