ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಳಸಾ-ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಪತ್ರ ಚಳವಳಿ

Vishwanath S
Updated On : 25 Feb 2014, 11:07 am

ಅಣ್ಣಿಗೇರಿ: ಸಮರ್ಪಕ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಲೋಕಸಭೆ ಚುನಾವಣೆ ಪೂರ್ವದಲ್ಲೇ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಕಳಸಾ ಬಂಡೂರಿ ಹೋರಾಟ ಸಮಿತಿ ಸದಸ್ಯರು ಸೋಮವಾರ ಪತ್ರ ಚಳವಳಿ ನಡೆಸಿದರು.
ಕಳಸಾ ಬಂಡೂರಿ ಯೋಜನೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ್ದಾಗಿದ್ದು ಇದಕ್ಕೆ ಯಾವುದೇ ರೀತಿಯಿಂದ ಪ್ರತಿರೋಧ ವ್ಯಕ್ತಪಡಿಸಲು ಬರುವುದಿಲ್ಲ. ಆದ್ದರಿಂದ ಈ ಯೋಜನೆ ಆರಂಭಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಮಧ್ಯಂತರ ಆದೇಶ ನೀಡಬೇಕು ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.
ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಒಕ್ಕೂರಲಿನಿಂದ ಆಗ್ರಹಿಸಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಯಿತು.
ಪುರಸಭೆ ಮಾಜಿ ಉಪಾಧ್ಯಕ್ಷ ಚಂದ್ರಕಾಂತ ವೆರ್ಣೇಕರ, ಗಂಗಯ್ಯ ಹಿರೇಮಠ, ಈರಣ್ಣಾ ಪಟ್ಟೇದ, ದ್ಯಾಮಣ್ಣಾ ಬಡಿಗೇರ, ಮಲ್ಲಪ್ಪ ನರಗುಂದ, ರವಿರಾಜ ವೆರ್ಣೇಕರ ಮತ್ತಿತರರಿದ್ದರು.
ನಾಳೆ ದರ ನಿರ್ಧರಣಾ ಸಮಿತಿ ಸಭೆ
ಧಾರವಾಡ: ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ನಿಕಲ್ ಹಾಲ್ನಲ್ಲಿ ಫೆ. 26ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಿರ್ಟಿಎಸ್ ಯೋಜನೆಯ ಭೂ ಮಾಲೀಕರ ದರ ನಿರ್ಧರಣಾ ಸಮಿತಿ ಸಭೆ ನಡೆಯಲಿದೆ. ಉಣಕಲ್ (ಕಂದಾಯ) ಹಾಗೂ ಹುಬ್ಬಳ್ಳಿ ನಗರದ ಸಂತ್ರಸ್ತ ಭೂ ಮಾಲೀಕರಿಗೆ ಮಾತ್ರ ಬೆಳಗ್ಗೆ 10.30ಕ್ಕೆ ನಡೆಯುವ ಸಭೆಗೆ ಹಾಜರಾಗಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
28ರಂದು ಜಿಲ್ಲೆಗೆ ಸಚಿವ ಗುಂಡೂರಾವ್
ಧಾರವಾಡ: ಆಹಾರ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಫೆ. 28ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಬೆಳಗಾವಿಯಿಂದ ನವಲಗುಂದಕ್ಕೆ ಪ್ರಯಾಣಿಸುವರು. ಮಾರ್ಗಮಧ್ಯದಲ್ಲಿ ಗುಮ್ಮಗೋಳ ಸೇತುವೆ ಕಾಮಗಾರಿ ಶಂಕುಸ್ಥಾಪನೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಉದ್ಘಾಟನೆ ನೆರವೇರಿಸುವರು. 11ಕ್ಕೆ ನವಲಗುಂದ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರದಲ್ಲಿ ಸವಿತಾ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1ಕ್ಕೆ ಬಸವೇಶ್ವರ ನಗರದ ದೇವರಾಜು ಅರಸು ಭವನ ಶಂಕುಸ್ಥಾಪನೆ. 1.30ರಿಂದ 2.30ರ ವರೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 3.30ರಿಂದ ಸಂಜೆ 5.30 ರವರೆಗೆ ನವಲಗುಂದದ ಶಂಕರ ಕಲಾ ವಿದ್ಯಾಲಯ ಸಭಾಭವನದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ನಂತರ ಹಳ್ಳಿಕೇರಿ ಕುಡಿಯುವ ನೀರಿನ ಯೋಜನೆಯ ಉದ್ಘಾಟಿಸುವರು. ನಂತರ ಅಣ್ಣಿಗೇರಿಯಲ್ಲಿ ಹೊಸ ತಾಲೂಕು ರಚನಾ ಸಮಿತಿಯೊಂದಿಗೆ ಚರ್ಚೆ ನಡೆಯಲಿದೆ. ರಾತ್ರಿ 9ಕ್ಕೆ ವಿಮಾನ ಮೂಲಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮರು ಪ್ರಯಾಣ ಮಾಡುವರೆಂದು ಸಚಿವರ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
ನಾಳೆ ಪ್ರೌಢಶಾಲೆ ಶಿಕ್ಷಕರ ಹುದ್ದೆ ಬಡ್ತಿ ಕೌನ್ಸೆಲಿಂಗ್
ಧಾರವಾಡ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮಾದರಿ, ಹಿರಿಯ, ಕಿರಿಯ ಕನ್ನಡ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ 1-1-2014ಕ್ಕೆ ಇದ್ದಂತೆ ತರಬೇತಿ ಹೊಂದಿದ ಪದವೀಧರ ಸಹಾಯಕ ಶಿಕ್ಷಕರಿಗೆ, ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್ -2 ವಿಷಯವಾರು ಹುದ್ದೆಗಳಿಗೆ ಹಾಗೂ ದೈಹಿಕ ಶಿಕ್ಷಣ ಗ್ರೇಡ್ -1 ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ ಅರ್ಹತೆ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿಷಯವಾರು ಅರ್ಹತಾ ಪಟ್ಟಿಯನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಅರ್ಹತಾ ಪಟ್ಟಿಯಲ್ಲಿ ತಮ್ಮ ಸೇವಾ ವಿವರಗಳನ್ನು ಗಮನಿಸಿ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಲಕ ಫೆ. 25ರ ಸಂಜೆ 5ರೊಳಗೆ ಡಿಡಿಪಿಐ ಕಚೇರಿಗೆ ಸಲ್ಲಿಸಬೇಕು. ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಬಡ್ತಿ ಕೌನ್ಸೆಲಿಂಗ್ಗೆ  ಅರ್ಹತೆ ಹೊಂದಿದ ಶಿಕ್ಷಕರು ಫೆ. 26ರಂದು ಉಪನಿರ್ದೇಶಕರ ಕಚೇರಿಯಲ್ಲಿ ನಡೆಯುವ ಕೌನ್ಸೆಲಿಂಗ್ನಲ್ಲಿ ಭಾಗವಹಿಸಿ ಬಡ್ತಿ ಸ್ಥಳ ನಿಯುಕ್ತಿ ಆದೇಶ ಪಡೆಯಲು ಪ್ರಕಟಣೆ ತಿಳಿಸಿದೆ.
ಆಶ್ರಯ ಅರ್ಜಿ ಅವಧಿ ಮಾ. 3ರ ವರೆಗೆ ವಿಸ್ತರಣೆ
ಹುಬ್ಬಳ್ಳಿ: ಆಶ್ರಯ ಯೋಜನೆಯಡಿ ವಿತರಿಸಲಾಗಿರುವ ಅರ್ಜಿಗಳನ್ನ್ನು ಸೂಕ್ತ ದಾಖಲೆಗಳೊಂದಿಗೆ ಮರಳಿ ಪಡೆಯಲು ನಿಗದಿ ಪಡಿಸಲಾಗಿದ್ದ ದಿನಾಂಕವನ್ನು ಮಾ. 3ರವರೆಗೆ ವಿಸ್ತರಿಸಲಾಗಿದೆ. ಸರ್ಕಾರಿ ರಜೆಗಳು ಬಂದಿರುವ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಮಾ. 3ರವರೆಗೆ ವಿಸ್ತರಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಿವಾಳ, ಬಾಲಸುಬ್ರಹ್ಮಣ್ಯಗೆ ಅಭಿನಂದನೆ ಇಂದು
ಧಾರವಾಡ: ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಬಿ. ಕಲಿವಾಳ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಬಾಲಸುಬ್ರಮಣ್ಯ ಅವರ ಅಭಿನಂದನಾ ಸಮಾರಂಭ ಫೆ. 25ರಂದು ಹು-ಧಾ ನಾಗರಿಕ ಪರಿಸರ ಸಮಿತಿ ವತಿಯಿಂದ ನಡೆಯಲಿದೆ.  ಅಂದು ಸಂಜೆ 5ಕ್ಕೆ  ಶ್ರೀನಗರ ಹಳಿಯಾಳ ರಸ್ತೆಯಲ್ಲಿರುವ ಪರಿಸರ ಭವನದಲ್ಲಿ ನಡೆಯಲಿದ್ದು ನಾಡೋಜ ಚನ್ನವೀರ ಕಣವಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಪಿ. ಹಿರೇಮಠ ಆಗಮಿಸುವರು ಎಂದು ಶಂಕರ ಕುಂಬಿ ತಿಳಿಸಿದ್ದಾರೆ.
ಕಬ್ಬು: ಸಭೆ ಇಂದು
ಕಲಘಟಗಿ: ತಾಲೂಕಿನ ಕಬ್ಬು ಬೆಳೆಗಾರರ ಸಭೆ ಫೆ. 25ರಂದು ಬೆಳಗ್ಗೆ 11ಕ್ಕೆ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಬೆಳೆದು ನಿಂತ ಕಬ್ಬನ್ನು ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸಾಗಾಣಿಕೆ ಮಾಡಿಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಸೇರಿದಂತೆ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎನ್. ಬನವಣ್ಣವರ ತಿಳಿಸಿದ್ದಾರೆ. ತಹಸೀಲ್ದಾರರ ಸಮ್ಮುಖದಲ್ಲಿ ನಡೆಯಲಿರುವ ಈ ಸಭೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಇಂದು, ನಾಳೆ ಕೈದೋಟ ಜಾಗೃತಿ ಕಾರ್ಯಕ್ರಮ
ಧಾರವಾಡ: ಟೆರೆಸ್ ಗಾರ್ಡನ್ ಮತ್ತು ತಾರಸಿ ಕೈದೋಟ ಯೋಜನೆಯಡಿ ಫೆ. 25ರಂದು ಬೆಳಗ್ಗೆ 10:30ಕ್ಕೆ ಹುಬ್ಬಳ್ಳಿ ನಗರದ ರಾಜೀವ ಗಾಂಧಿ ನಗರದ ಮಾರುತಿ ದೇವಸ್ಥಾನದಲ್ಲಿ ಮತ್ತು 26ರಂದು ಸಂಜೆ 5ಕ್ಕೆ ನೇಕಾರ ನಗರದ ಜವಳಿಗಲ್ಲಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರ ಪ್ರದೇಶಗಳ ಮನೆಗಳ ತಾರಸಿಗಳ ಮೇಲೆ ತರಕಾರಿ ತೋಟ ಮತ್ತು ಹೂದೋಟ ನಿರ್ಮಿಸುವುದಕ್ಕೆ ತೋಟಗಾರಿಕೆ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದು ತಾರಸಿ ಮೇಲೆ ಕೈದೋಟ ಮಾಡಲು ಇಚ್ಛಿಸುವವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ 94805 88168ನ್ನು ಸಂಪರ್ಕಿಸಿ.
ಇಂದು ಪುಣ್ಯಸ್ಮರಣೆ
ಧಾರವಾಡ: ಆಲೂರು ವೆಂಕಟರಾಯರ 50ನೇ ಪುಣ್ಯಸ್ಮರಣೆಯನ್ನು ಆಲೂರು ಟ್ರಸ್ಟ್ ವತಿಯಿಂದ ಫೆ. 25ರಂದು ಆಚರಿಸಲಾಗುತ್ತಿದೆ. ಕಾನೂನು ವಿವಿ ಕುಲಪತಿ ಡಾ. ಟಿ.ಆರ್. ಸುಬ್ರಮಣ್ಯ ಹಾಗೂ ಜಿಲ್ಲಾಧಿಕಾರಿ ಸಮೀರ ಶುಕ್ಲ ಭಾಗವಹಿಸುತ್ತಾರೆ. ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ ಉಪನ್ಯಾಸ ನೀಡಲಿದ್ದಾರೆ. ಡಾ.ಕೆ. ರಾಘವೇಂದ್ರರಾವ ಆಲೂರು ಹಾಗೂ ಡಾ. ಶ್ರೀನಿವಾಸ ರಿತ್ತಿ ಭಾಗವಹಿಸುವರು ಎಂದು ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಿ.ಡಿ. ಹಿರೇಗೌಡರ ತಿಳಿಸಿದ್ದಾರೆ.
ಧಾರವಾಡ: 27ರಂದು ಭಕ್ತಿ ಸಿಂಚನ
ಧಾರವಾಡ: ಇಲ್ಲಿಯ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು ಹಿಂದಿರುವ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ  ಫೆ. 27ರ ಬೆಳಗ್ಗೆ 7.30ರಿಂದ ಮಹಾಶಿವರಾತ್ರಿ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ನಿರ್ದೇಶಕ ಸುನೀಲ ಕುಲಕರ್ಣಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮೇಶ್ವರ ದರ್ಶನಕ್ಕೆ ಬರುವ ಭಕ್ತರಿಗಾಗಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕೊಳಲು, ತಬಲಾ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ವಚನ ಗಾಯನ, ಭಕ್ತಿ ಗಾಯನ, ಭರತನಾಟ್ಯ ಹಾಗೂ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ, 13 ಕಲಾ ಗುರುಗಳನ್ನು ಸನ್ಮಾನಿಸಲಾಗುವುದು. ಈ ಸಮಾರಂಭವನ್ನು ಅಂದು ಬೆಳಗ್ಗೆ 7.30ಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಡಾ. ಶಿವಾನಂದ ಶೆಟ್ಟರ ಉದ್ಘಾಟಿಸುವರು. ಅತಿಥಿಗಳಾಗಿ ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಪ್ರಾಚಾರ್ಯ ಡಾ. ವಾದಿರಾಜ ಕಟ್ಟಿ, ಸೋಮೇಶ್ವರ ದೇವಸ್ಥಾನದ ಅರ್ಚಕ ಗಂಗಯ್ಯ ಬಳ್ಳಾರಿಮಠ, ವಿದುಷಿ ನಾಗರತ್ನಾ ಹಡಗಲಿ ಹಾಗೂ ಸಾಕಾರ ಸಂಸ್ಥೆ ಅಧ್ಯಕ್ಷ ಡಾ. ಶುಭದಾ ಆಗಮಿಸುವರು ಎಂದು ಹೇಳಿದರು.
ಸಂಜೆ 6.30ಕ್ಕೆ ಸಮಾರೋಪ ನಡೆಯಲಿದ್ದು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಭಾಗವಹಿಸುತ್ತಾರೆ. ಅನಂತರ ಗಜಾನನ ಮಹಾಲೆ, ಸುಜಾತಾ ರಾಜಗೋಪಾಲ, ಪಂ. ರವೀಂದ್ರ ಜಕಾತಿ ಸೇರಿದಂತೆ 13 ಕಲಾವಿದರಿಗೆ ಗೌರವ ಸಮರ್ಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವಿದುಷಿ ಸೃಷ್ಟಿ ಕುಲಕರ್ಣಿ ಇದ್ದರು.
ಇಂದಿನಿಂದ ಲೋಕಾಯುಕ್ತರ ಜಿಲ್ಲಾ ಪ್ರವಾಸ
ಧಾರವಾಡ: ಫೆ. 25ರಿಂದ 28ರ ವರೆಗೆ ಜಿಲ್ಲೆಯಲ್ಲಿ   ಲೋಕಾಯುಕ್ತರ ಪೊಲೀಸ್ ಅಧಿಕಾರಿಗಳು ವಿವಿಧೆಡೆ ಪ್ರವಾಸ ಮಾಡಿ ಜನರಿಂದ ಅಹವಾಲು ಸ್ವೀಕರಿಸುವರು.
25 ರಿಂದ ಧಾರವಾಡ ಹಳೇ ಸರ್ಕೀಟ್ ಹೌಸ್ನಲ್ಲಿ, ಮತ್ತು ಕಲಘಟಗಿ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11ರಿಂದ 1 ಗಂಟೆವರೆಗೆ, 26 ರಂದು ಹುಬ್ಬಳ್ಳಿ ಸರ್ಕೀಟ್ ಹೌಸ್ ಹಾಗೂ ಕುಂದಗೋಳ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11ರಿಂದ 1 ರ ವರೆಗೆ ಹಾಗೂ ನವಲಗುಂದ ಪ್ರವಾಸಿ ಮಂದಿರದಲ್ಲಿ ಫೆ. 28ರಂದು ಬೆಳಗ್ಗೆ 11ರಿಂದ 1ರವರೆಗೆ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಜಿಲ್ಲೆಯ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿ ಕೊಡಲು ಅನವಶ್ಯಕ ವಿಳಂಬ, ಲಂಚದ ಹಣ ಬೇಡಿಕೆ, ಭ್ರಷ್ಟಾಚಾರ, ಸಾರ್ವಜನಿಕ ಹಣದ ದುರುಪಯೋಗ ಮೊದಲಾದ ಪ್ರಕರಣಗಳು ಇದ್ದಲ್ಲಿ ನ್ಯಾಯಾಲಯದ ವಿಚಾರಣೆ ಬಾಕಿ ಪ್ರಕರಣ ಹೊರತುಪಡಿಸಿ ತಮ್ಮ ದೂರುಗಳನ್ನು ಸಲ್ಲಿಸಬಹುದು ಎಂದು ಲೋಕಾಯುಕ್ತ ಅಧೀಕ್ಷಕ ಕೆ. ಪರಶುರಾಮ ತಿಳಿಸಿದ್ದಾರೆ.
2ನೇ ದಿನಕ್ಕೆ ಹಿರೇಮಠ ಉಪವಾಸ ಸತ್ಯಾಗ್ರಹ
ಧಾರವಾಡ: ಧಾರವಾಡ ಹೈಕೋರ್ಟ್ ಪೀಠದಲ್ಲಿ ಕೆಎಟಿ ಸ್ಥಾಪನೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ 2ನೇ ದಿನ ಪೂರೈಸಿದೆ.
ಬಿ.ಡಿ. ಹಿರೇಮಠ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ವೈದ್ಯರು ಅವರನ್ನು ತಪಾಸಣೆಗೆ ಒಳಪಡಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಭಾನುವಾರದಿಂದ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿ ಕುಳಿತಿರುವ ಹೋರಾಟಕ್ಕೆ ಸೋಮವಾರ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಲ್. ಜಗದೀಶ, ಬಸವತತ್ವ ಪ್ರಚಾರ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಬೆಲ್ಲದ, ಮಲೆನಾಡು ಶಿಕ್ಷಣ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕರ್ನಾಟಕ ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿಯ ಬಿ.ಎಂ. ಹನಸಿ, ಬಿಜಾಪುರದ ಡಿ.ಎಫ್. ಸಿತೋಳೆ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಗಂಗನಗೌಡ ಮುದಿಗೌಡರ, ವೀರಶೈವ ಸಮಾಜದ ಮುಖಂಡ ಶಿವಾನಂದ ಕವಳಿ, ವಕೀಲರ ಸಂಘದ ಎಸ್.ಎಚ್. ಬೇತೂರಮಠ, ಮಹಾದೇವ ಟಗರಿ ಮತ್ತಿತರರು ಬೆಂಬಲ ಸೂಚಿದರು.
ವಿದ್ಯಾರ್ಥಿಗಳಿಗೆ ಶಿಸ್ತು ಅಗತ್ಯ: ಗಂಗಲ್
ಹುಬ್ಬಳ್ಳಿ: ವಿದ್ಯಾರ್ಥಿಗಳು ಶಿಬಿರದ ಮೌಲ್ಯಗಳಾದ ಶಿಸ್ತು ಮತ್ತು ಸಂಯಮಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ. ಗಂಗಲ್ ಹೇಳಿದರು.
ತಾಲೂಕಿನ ಕಟ್ನೂರು ಗ್ರಾಮದಲ್ಲಿ ಪಿ.ಸಿ.  ಜಾಬಿನ್ ಕಾಲೇಜು ಎನ್ಎಸ್ಎಸ್ ಘಟಕದ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನಕ್ಕೆ ನಗರ ಜೀವನಕ್ಕಿಂತ ಹಳ್ಳಿಯ ಜೀವನ ಉತ್ತಮ ಎಂದು ಹೇಳಿದರು. ಕಾಲೇಜು ಪ್ರಾಚಾರ್ಯ ಎಂ.ಟಿ. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಕವಿವಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಪ್ರೊ. ಡಿ.ಜಿ. ಹಾಜವಗೋಳ, ಗ್ರಾಮ ನೈರ್ಮಲ್ಯಕ್ಕೆ ಕೆಲಸ ಮಾಡುವ ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಗ್ರಾಮಸ್ಥರು ನೆರವಾಗಬೇಕು ಎಂದು ಹೇಳಿದರು. ಡಾ. ಪಿ.ಪಿ.  ಸಮೋರೇಖರ್ ಪ್ರಾಸ್ತಾವಿಕ ಮಾತನಾಡಿದರು. ಕಟ್ನೂರು ಗ್ರಾಮದ ದೇವೇಂದ್ರಪ್ಪ ಬಡಿಗೇರ, ಗಫೂರಸಾಬ್ ಕುಂದಗೋಳ, ಮಹಾದೇವಪ್ಪ ವಿಜಾಪುರ, ನಿಂಗಪ್ಪ ರಡ್ಡೇರ್, ಪರಶುರಾಮ ಸಿದ್ಧಣ್ಣವರ, ಬಸವರಾಜ ನರೇಂದ್ರ ಸೇರಿದಂತೆ ಇನ್ನಿತರರು ಇದ್ದರು.
ಅಣ್ಣಿಗೇರಿ: ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ
ಅಣ್ಣಿಗೇರಿ: ಇಲ್ಲಿನ ಶ್ರೀಮತಿ ಬಸಮ್ಮ ಕಾಶಪ್ಪ ಅಂಗಡಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಸೋಮವಾರ ನಡೆಯಿತು. ಅಧ್ಯಕ್ಷತೆವಹಿಸಿ ಮಾತನಾಡಿದ ಬಸವೇಶ್ವರ ಶಿಕ್ಷಣ ಸಂಸ್ಥೆ ಚೇರ್ಮನ್ ಪ್ರಕಾಶ ಅಂಗಡಿ, ವಿದ್ಯಾರ್ಥಿಗಳು ದೃಢ ವಿಶ್ವಾಸ ಹೊಂದಿ ಕಠಿಣ ಪರಿಶ್ರಮ ಮಾಡಿದ್ದಲ್ಲಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು. ಮುಖ್ಯಅತಿಥಿಯಾಗಿದ್ದ ಸುಹಾಸ ನವಲಗುಂದ, ಮಕ್ಕಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚೆಚ್ಚು ತಿಳಿವಳಿಕೆ ನೀಡಬೇಕಿದೆ ಎಂದರು. ಚಂಬಣ್ಣ ಸುರಕೋಡ, ಪ್ರಗತಿಪರ ರೈತ ಗಿರಿಯಪ್ಪನವರ ದ್ಯಾವನೂರ, ಮಹಾಬಳೇಶ್ವರ ಹೆಬಸೂರ, ಪುರದಪ್ಪ ಯಮನೂರ ಪಾಲ್ಗೊಂಡಿದ್ದರು.
ನಿಲ್ಲದ ಸ್ತ್ರೀ ಶೋಷಣೆ: ವಿಷಾದ
ಕುಂದಗೋಳ: ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಸಾಕಷ್ಟು ಮುನ್ನಡೆ ಸಾಧಿಸಿದ್ದರೂ, ಸ್ತ್ರೀ ಶೋಷಣೆ ಮಾತ್ರ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಎಸ್ಜೆಎಂವಿ ಮಹಿಳಾ ಕಾಲೇಜ್ನ ಪ್ರಾಚಾರ್ಯ ಡಾ. ಉಮಾ ಮಠದ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಸಂಶಿ ಗ್ರಾಮದಲ್ಲಿ ಏರ್ಪಡಿಸಲಾಗಿರುವ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ನಡೆದ ಮಹಿಳಾ ಚಿಂತನಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ದಿಟ್ಟತನವನ್ನು ಮೈಗೂಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬ ಮಹಿಳೆಯೂ ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಮಹಿಳಾ ಶಸಕ್ತಿ ಕುರಿತು ಮಾತನಾಡಿದರು. ಇದಕ್ಕೂ ಮೊದಲು ನಡೆದ ರೈತ ಗೋಷ್ಠಿಯಲ್ಲಿ ರೈತರ ಬದುಕು ಭವಿಷ್ಯ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಾಜೇಂದ್ರ ಪೋದ್ಧಾರ ಉಪನ್ಯಾಸ ನೀಡಿದರು. ಜಾನಪದ ಹಾಗೂ ರಂಗಭೂಮಿ ಕುರಿತು ಜಾನಪದ ವಿಶ್ವವಿದ್ಯಾಲಯದ ಸಂಯೋಜಕ ಶ್ರೀಶೈಲ ಹುದ್ದಾರ, ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತ ವೀರೇಶ ಎಂ.ಪಿ. ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಹನೀಯರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ತಾಲೂಕು ಅಧ್ಯಕ್ಷ ಚಂದ್ರಶೇಖ ಪಾಟೀಲ, ಎ.ಬಿ. ಉಪ್ಪಿನ, ಡಿ.ಸಿ. ಬೊಮ್ಮನಗೌಡ್ರ, ಪ್ರೊ. ರಮೇಶ ಅತ್ತಿಗೇರಿ, ಎಸ್.ಎಸ್. ಅರಳಿಕಟ್ಟಿ ಮತ್ತಿರರು ಪಾಲ್ಗೊಂಡಿದ್ದರು.
ಗುಣಮಟ್ಟ ಶಿಕ್ಷಣದಿಂದ ಸಾಧನೆ ಸಾಧ್ಯ
ಹುಬ್ಬಳ್ಳಿ: ಅದರಗುಂಚಿಯ ಸಿಐಸಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ 2ನೇ ವಾರ್ಷಿಕೋತ್ಸವವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷ ಲಿಂಗರಾಜ ಅಂಗಡಿ ಉದ್ಘಾಟಿಸಿದರು. ಸಾನ್ನಿಧ್ಯ ವಹಿಸಿದ್ದ ವಿರಕ್ತಮಠ ರಾಯನಾಳದ ಮಹಾಂತ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿಯೂ ಕೂಡಾ ಪಾಲಕರು ಶಿಕ್ಷಣಕ್ಕೆ ಒತ್ತು ಕೊಟ್ಟು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿದ್ದಾರೆ ಎಂದರು. ಮಾಜಿ ಶಾಸಕ ಎಸ್.ಐ.ಚಕ್ಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಫ್. ಭರಮಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಸುಜಾತಾ ಸ್ವಾಗತಿಸಿದರು. ಮಕ್ಕಳು ಪ್ರಾರ್ಥಿಸಿದರು. ಮಂಜುನಾಥ್ ಯಲಿವಾಳ ಹಾಗೂ  ಮೇರಿ ನಿರೂಪಿಸಿದರು. ಮುಖೋಧ್ಯಾಪಕಿ ಪ್ರೇಮಲತಾ ಕ್ಯಾವ್ಲಿನ್ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ರತ್ನವ್ವ್ನ ಕಳ್ಳಿಮನಿ, ಗದಿಗೆಪ್ಪ ಕಳ್ಳಿಮನಿ,  ಎಸ್.ಕೆ ಕಲ್ಲಯ್ಯನವರ,  ಎನ್.ಎಸ್. ಹತ್ಯಾಳ ಮತ್ತಿತರರು ಹಾಜರಿದ್ದರು.
ಹುಬ್ಬಳ್ಳಿ: ಮಹಿಳೆ ನಾಪತ್ತೆ
ಹುಬ್ಬಳ್ಳಿ: ನಗರದ ಯಲ್ಲಾಪುರ ಓಣಿಯ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಲ್ಲಾಪುರ ಓಣಿಯ ರುಕ್ಸಾನಾ ಜಾಕೀರಖಾನ್ ಜಕಾತಿ ನಾಪತ್ತೆಯಾಗಿರುವ ಮಹಿಳೆ. ಕೆಲವು ದಿನಗಳ ಹಿಂದೆ ಮನೆಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾಳೆ ಎಂದು ಅಮೀರಖಾನ್ ಗೌಸುಖಾನ್ ಜಕಾತಿ ಅವರು ದೂರು ನೀಡಿದ್ದಾರೆ.
ಬೈಕ್ ಸವಾರ ಸಾವು
ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ನೇಕಾರ ಭವನದ ಎದುರು ವೇಗವಾಗಿ ಬರುತ್ತಿದ್ದ ಬೈಕ್ ಸವಾರನೊಬ್ಬ ನಾಯಿಯ ಜೀವ ಉಳಿಸಲು ಹೋಗಿ ತಾನೇ ಜೀವ ತೆತ್ತಿದ್ದಾನೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತನಗರದ ಸ್ಪಂದನ್ ಚಿತ್ರಿಕ್ (29) ಸ್ಥಳದಲ್ಲಿ ಮೃತಪಟ್ಟ ಯುವಕ. ನೇಕಾರ ಭವನದ ಹತ್ತಿರದ ರೆಡ್ಡಿ ಕ್ರಾಸ್ ಬಳಿ ಬಜಾಜ್ ಪಲ್ಸರ್ ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದ ಸ್ಪಂದನ್, ನಾಯಿಯೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಸ್ಕಾರ ಶಾಲೆಯಲ್ಲಿ ವಾರ್ಷಿಕೋತ್ಸವ
ಕಲಘಟಗಿ: ಪಟ್ಟಣದ ಸಂಸ್ಕಾರ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಯಾಗಿದ್ದ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್. ತೋಟಗುಂಟಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಸಂಸ್ಕಾರ ಶಾಲೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಹಸೀಲ್ದಾರ್ ಕೆ.ಆರ್. ಕುಲಕರ್ಣಿ ಉದ್ಘಾಟನೆ ನೆರವೇರಿಸಿದರು. ಶಾಲಾ ಸಮಿತಿ ಅಧ್ಯಕ್ಷ ರಾಕೇಶ ಅಳಗವಾಡಿ ಅಧ್ಯಕ್ಷತೆವಹಿಸಿದ್ದರು. ಮುಖ್ಯಶಿಕ್ಷಕಿ ರಾಜೇಶ್ವರಿ ಹುಲಗೂರ, ಶಬೀನಾ ಕಲಘಟಗಿ, ಸೀಮಾ ಗೋಂದಕರ, ಶುಭಂ ವಂಡಕರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement