ಗುಣಾತ್ಮಕ ಶಿಕ್ಷಣದಿಂದ ಅಭಿವೃದ್ಧಿ: ವರ್ಧನ್
ಧಾರವಾಡ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ಡಿಡಿಪಿಐ ಬಿ.ಕೆ.ಎಸ್. ವರ್ಧನ್ ಹೇಳಿದರು.
ಇಲ್ಲಿನ ಕ್ಲಾಸಿಕ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆ ಲಿಟ್ಲ್ಬರ್ಡ್ಸ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಹೊಸ ಆಯಾಮಗಳಿಗೆ ತೆರೆದುಕೊಳ್ಳುತ್ತಿರುವ ಆಧುನಿಕ ಜಗತ್ತಿನಲ್ಲಿ ನಮ್ಮ ದೇಶವೂ ಸಹ ಶಕ್ತಿ ಪ್ರದರ್ಶಿಸಬೇಕಾದರೆ ಗುಣಾತ್ಮಕ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕಳೆದ ಒಂದೂವರೆ ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ ಉಪ್ಪಾರ ಹಾಗೂ ಅವರ ತಂಡ ರಾಜ್ಯಕ್ಕೆ ಉತ್ತಮ ಅಧಿಕಾರಿಗಳನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಷಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇಮನಿ, ಮಗುವಿನ ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗುವಂತಹ ಶಿಕ್ಷಣದ ಅವ್ಯಶ್ಯಕತೆಯಿದ್ದು, ಈ ಕಾರ್ಯವನ್ನು ಉತ್ತಮವಾಗಿ ಮಾಡುತ್ತಿರುವ ಕ್ಲಾಸಿಕ್ ಸಂಸ್ಥೆ ನಿಜಕ್ಕೂ ಅಭಿನಂದನಾರ್ಹ ಎಂದರು. ಮುಖ್ಯ ಅತಿಥಿಗಳಾಗಿದ್ದ ಶಹರ ಪೊಲೀಸ್ ಠಾಣೆಯ ಸಿಪಿಐ ಬಸವೇಶ್ವರ ಹೀರಾ ಮಾತನಾಡಿ, ಮಗುವಿನ ಶಿಕ್ಷಣದ ಆರಂಭದ ದಿನಗಳಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ವದ್ದು. ಬಿಳಿಹಾಳೆಯಂತಿರುವ ಮಗುವಿನ ಮನಸ್ಸಿನಲ್ಲಿ ಅಚ್ಚಳಿಯದಂತಹ ಉತ್ತಮ ಮೌಲ್ಯಗಳನ್ನು ಬಿತ್ತಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ ಉಪ್ಪಾರ, ಸ್ಪರ್ಧಾ ಸ್ಫೂರ್ತಿ ಮಾಸ ಪತ್ರಿಕೆ ನಿರ್ದೇಶಕಿ ಹಾಗೂ ಪ್ರಕಾಶಕಿ ರೇಣುಕಾ ಉಪ್ಪಾರ, ಕೆಎಎಸ್ ಅಧಿಕಾರಿಗಳಾದ ಹನುಮಂತಪ್ಪ ತೇಲಿ, ಬಾಲಸುಬ್ರಮಣ್ಯಂ, ಸಾವಂತ, ಸಿದ್ದಮ್ಮ ಉಪ್ಪಾರ, ಮುಖ್ಯೋಪಾಧ್ಯಾಯಿನಿ ಶಿವಲೀಲಾ ಕುರವತ್ತಿ ಇದ್ದರು.