ಧಾರವಾಡ: 27ರಂದು ಭಕ್ತಿ ಸಿಂಚನ
ಧಾರವಾಡ: ಇಲ್ಲಿಯ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು ಹಿಂದಿರುವ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಫೆ. 27ರ ಬೆಳಗ್ಗೆ 7.30ರಿಂದ ಮಹಾಶಿವರಾತ್ರಿ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ನಿರ್ದೇಶಕ ಸುನೀಲ ಕುಲಕರ್ಣಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮೇಶ್ವರ ದರ್ಶನಕ್ಕೆ ಬರುವ ಭಕ್ತರಿಗಾಗಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕೊಳಲು, ತಬಲಾ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ವಚನ ಗಾಯನ, ಭಕ್ತಿ ಗಾಯನ, ಭರತನಾಟ್ಯ ಹಾಗೂ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ, 13 ಕಲಾ ಗುರುಗಳನ್ನು ಸನ್ಮಾನಿಸಲಾಗುವುದು. ಈ ಸಮಾರಂಭವನ್ನು ಅಂದು ಬೆಳಗ್ಗೆ 7.30ಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಡಾ. ಶಿವಾನಂದ ಶೆಟ್ಟರ ಉದ್ಘಾಟಿಸುವರು. ಅತಿಥಿಗಳಾಗಿ ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಪ್ರಾಚಾರ್ಯ ಡಾ. ವಾದಿರಾಜ ಕಟ್ಟಿ, ಸೋಮೇಶ್ವರ ದೇವಸ್ಥಾನದ ಅರ್ಚಕ ಗಂಗಯ್ಯ ಬಳ್ಳಾರಿಮಠ, ವಿದುಷಿ ನಾಗರತ್ನಾ ಹಡಗಲಿ ಹಾಗೂ ಸಾಕಾರ ಸಂಸ್ಥೆ ಅಧ್ಯಕ್ಷ ಡಾ. ಶುಭದಾ ಆಗಮಿಸುವರು ಎಂದು ಹೇಳಿದರು.
ಸಂಜೆ 6.30ಕ್ಕೆ ಸಮಾರೋಪ ನಡೆಯಲಿದ್ದು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಭಾಗವಹಿಸುತ್ತಾರೆ. ಅನಂತರ ಗಜಾನನ ಮಹಾಲೆ, ಸುಜಾತಾ ರಾಜಗೋಪಾಲ, ಪಂ. ರವೀಂದ್ರ ಜಕಾತಿ ಸೇರಿದಂತೆ 13 ಕಲಾವಿದರಿಗೆ ಗೌರವ ಸಮರ್ಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವಿದುಷಿ ಸೃಷ್ಟಿ ಕುಲಕರ್ಣಿ ಇದ್ದರು.