ರಾಸಾಯನಿಕ ಕೃಷಿ: ಭೂಮಿ ನಾಶ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 24
ರಾಸಾಯನಿಕ ಕೃಷಿ ಪದ್ಧತಿಯು ಮನುಷ್ಯ ಹಾಗೂ ಭೂಮಿಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ ಎಂದು ಶಾಸಕ ವಿನಯ ಕುಲಕರ್ಣಿ ವಿಷಾದಿಸಿದರು.
ಸೋಮವಾರ ತಾಲೂಕಿನ ಹೆಬ್ಬಳ್ಳಿ ಗ್ರಾಪಂನಲ್ಲಿ ಅಭಿವೃದ್ಧಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಮನೆಯಲ್ಲಿಯೇ ಜಾನುವಾರುಗಳನ್ನು ಸಾಕಿ ಹೈನುಗಾರಿಕೆಯೊಂದಿಗೆ ಸಾವಯವ ಗೊಬ್ಬರ ಉತ್ಪಾದಿಸಬೇಕು ಎಂದು ಹೇಳಿದರು.
ಅಭಿವೃದ್ಧಿ ಹೊಳೆ...: ಒಂದೇ ಗ್ರಾಮದಲ್ಲಿ ಹತ್ತು-ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವ ಕೆಲಸ ಮಾಡಿದ್ದು ಸಂತಸ ತಂದಿದೆ. ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ತಾಲೂಕಿನ ಬಹುತೇಕ ಗ್ರಾಮಗಳ ರೈತರ ಹೊಲಗಳಿಗೆ ರಸ್ತೆ ನಿರ್ಮಿಸುವ ಕೆಲಸ ಆರಂಭವಾಗಿದೆ. ರೈತರಿಗೆ ರಾಶಿ ಮಾಡುವುದಕ್ಕಾಗಿ ಕಣ ನಿರ್ಮಿಸಲು ಹಣವನ್ನು ನೀಡುತ್ತಿದ್ದು, ಸಣ್ಣ ಹಿಡುವಳಿದಾರರಿಗೆ ಕುರಿ, ಆಕಳು ಕಟ್ಟುವ ದಡ್ಡಿಗಳನ್ನು ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ಈಗಾಗಲೇ 60 ಜನ ಸದುಪಯೋಗ ಪಡೆದಿದ್ದಾರೆ. ಹೆಬ್ಬಳ್ಳಿ ಗ್ರಾಪಂನಲ್ಲಿ 500 ಶೌಚಾಲಯಗಳನ್ನು ಮಾರ್ಚ್ನೊಳಗೆ ನಿರ್ಮಿಸಲಾಗುವುದು. ಜಲಾನಯನ ಇಲಾಖೆಯಡಿ ತಾಲೂಕಿನ 2,500 ಎಕರೆ ಪ್ರದೇಶದಲ್ಲಿ ರೈತರ ಹೊಲಗಳಲ್ಲಿ ಒಡ್ಡು ನಿರ್ಮಿಸಲು ಸುಮಾರು ರು. 70 ಲಕ್ಷ ಹಣ ವೆಚ್ಚಮಾಡಲು ಸರ್ಕಾರ ಮುಂದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಮಹೇಶ ಜೋಶಿ, ಹೆಚ್ಚಿನ ಅಭಿವೃದ್ಧಿ ಕೆಲಸಗಳು ಹೆಬ್ಬಳ್ಳಿಯಲ್ಲಿ ನಡೆಯುತ್ತಿದ್ದು ಸಾಕಷ್ಟು ಅನುದಾನ ಗ್ರಾಮಕ್ಕೆ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಜಲ ನಿರ್ಮಲ ಯೋಜನೆಯಡಿ ರು. 75 ಲಕ್ಷ ಅನುದಾನದ ಕಾಂಕ್ರಿಟ್ ರಸ್ತೆ ನಿರ್ಮಾಣ, ಬಹು ಗ್ರಾಮ ಕುಡಿವ ನೀರು ಸರಬರಾಜು ಯೋಜನೆಗೆ ಪ್ರಾಯೋಗಿಕ ಚಾಲನೆ, ಜಲಾನಯನ ಇಲಾಖೆಯ ಕಾಮಗಾರಿ, ಘನ ತ್ಯಾಜ್ಯ ವಿಲೇವಾರಿ ಘಟಕದ ಭೂಮಿ ಪೂಜೆ, ಅಂಗವಿಕಲರಿಗೆ ತ್ರಿಚಕ್ರ ವಿತರಿಸಲಾಯಿತು. ಗ್ರಾಮದ ಮಂಜುನಾಥ ಇಂಗಳೆ ಅವರಿಗೆ ಮೂರು ಚಕ್ರದ ಬೈಕ್ ವಿತರಿಸಲಾಯಿತು.
ಜಿ.ಪಂ. ಸದಸ್ಯೆ ಬಸಮ್ಮ ಪ್ಯಾಟಿ, ತಾ.ಪಂ. ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ, ಸಿಇಒ ಪಿ.ಎ. ಮೇಘಣ್ಣವರ, ವೈ.ಡಿ. ಕುನ್ನಿಭಾವಿ ಇದ್ದರು.