ಮಾ. 1ರಂದು ತಾಲೂಕು ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 26
ಹಿರಿಯ ಲೇಖಕ ಪ್ರೊ. ದುಷ್ಯಂತ ನಾಡಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಮಾರ್ಚ್ 1ರಂದು ತಾಲೂಕಿನ ಹೆಬ್ಬಳ್ಳಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಜರುಗಲಿದೆ.
ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತಾಲೂಕು ಕಸಾಪ ಅಧ್ಯಕ್ಷ ಗುರು ತಿಗಡಿ, ಈ ಸಮ್ಮೇಳನವನ್ನು ಪರಿಸರವಾದಿ, ಚಲನಚಿತ್ರ ನಟ ಸುರೇಶ ಹೆಬ್ಳೀಕರ ಉದ್ಘಾಟಿಸುವರು. ಬ್ರಹ್ಮಚೈತನ್ಯಾಶ್ರಮದ ದತ್ತಾವದೂತರು ಆಶಯ ನುಡಿ ಹೇಳಲಿದ್ದು, ಸಚಿವ ದಿನೇಶ ಗುಂಡೂರಾವ್ ಶ್ರೀಕ್ಷೇತ್ರ ಹೆಬ್ಬಳ್ಳಿ ಕೃತಿ ಬಿಡುಗಡೆಗೊಳಿಸುವರು. ಶಾಸಕ ವಿನಯ ಕುಲಕರ್ಣಿ ಹೆಬ್ಬಳ್ಳಿಯ ಸಾಂಸ್ಕೃತಿಕ ದರ್ಶನ ಕೃತಿ ಬಿಡುಗಡೆ ಮಾಡುತ್ತಾರೆ. ಇದಕ್ಕೂ ಮುಂಚೆ ಕನ್ನಡ ಜಾಗೃತಿ ನಡಿಗೆ ಹಾಗೂ ಧ್ವಜಾರೋಹಣ ನಡೆಯಲಿದೆ ಎಂದು ಹೇಳಿದರು. ಸಮ್ಮೇಳನಕ್ಕೆ ರು. 1 ಲಕ್ಷ ಅನುದಾನ ಬಿಡುಗಡೆಯಾಗುವ ಸಂಭವವಿದ್ದು, ಈಗಾಗಲೇ 1500 ಜನರಿಗೆ ಊಟ ಹಾಗೂ ಸಮ್ಮೇಳನದ ಸಿದ್ಧತೆ ನಡೆದಿದೆ. ಮಧ್ಯಾಹ್ನ 12.30ಕ್ಕೆ ಹೆಬ್ಬಳ್ಳಿ ಗ್ರಾಮ-ಸಾಂಸ್ಕೃತಿಕ ನೋಟ ಗೋಷ್ಠಿಯು ಡಾ. ಶ್ರೀಶೈಲ ಹುದ್ದಾರ ಅಧ್ಯಕ್ಷತೆಯಲ್ಲಿ ನಡೆಯಲಿದೆ. 2.30ಕ್ಕೆ ನಿಂಗಣ್ಣ ಕುಂಟಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಲಿದೆ. 3ನೇ ಗೋಷ್ಠಿ ಗ್ರಾಮ ಭಾರತ - ಸವಾಲುಗಳು ಮತ್ತು ಪರ್ಯಾಯ ಕುರಿತು ಪ್ರಾಚಾರ್ಯ ಶಶಿಧರ ತೋಡ್ಕರ್ ಅಧ್ಯಕ್ಷತೆಯಲ್ಲಿ ಸಂಜೆ 4ಕ್ಕೆ ನಡೆಯಲಿದೆ. ಕೃಷಿ, ಮಹಿಳೆ, ರಾಜಕೀಯ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಸಂಜೆ 6ಕ್ಕೆ ಸಮ್ಮೇಳನದ ಸಮಾರೋಪ ನಡೆಯಲಿದ್ದು, ಹೆಬ್ಬಳ್ಳಿ ಶಿವಾನಂದಮಠದ ಬ್ರಹ್ಮಾನಂದ ಶ್ರೀಗಳು ಮಾತನಾಡುವರು. ಡಿಡಿಪಿಐ ಬಿ.ಕೆ.ಎಸ್. ವರ್ಧನ್ ಅಧ್ಯಕ್ಷತೆ ವಹಿಸುತ್ತಾರೆ. ಸಾಹಿತಿ ಡಾ.ಎಂ.ಡಿ. ವಕ್ಕುಂದ ಸಮಾರೋಪ ನುಡಿ ಹೇಳುವರು. ಪ್ರೊ. ದುಷ್ಯಂತ ನಾಡಗೌಡ ಸಮ್ಮೇಳನಾಧ್ಯಕ್ಷರ ನುಡಿ ಹೇಳಲಿದ್ದಾರೆ. ನಂತರ 20 ಜನ ಸಾಧಕರಿಗೆ ಸನ್ಮಾನ ನಡೆಯಲಿದೆ. ಬಳಿಕ ಪರಮೇಶ್ವರ ಕುದರಿ ಅವರಿಂದ ಹಾಸ್ಯ ಕಾರ್ಯಕ್ರಮ ಮತ್ತು ಈರಣ್ಣ ಹುಬ್ಬಳ್ಳಿ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ ಎಂದು ತಿಗಡಿ ಹೇಳಿದರು.
ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಈಗಾಗಲೇ ಕುಂದಗೋಳ ತಾಲೂಕು ಸಮ್ಮೇಳನವಾಗಿದ್ದು ಮಾರ್ಚ್ 1ರಂದು ಧಾರವಾಡ ತಾಲೂಕು ಸಮ್ಮೇಳನ ನಡೆಯಲಿದೆ. ಮಾರ್ಚ್ 2ರಂದು ಪಾಟೀಲ ಕುಲಕರ್ಣಿ ಅವರ ಸರ್ವಾಧ್ಯಕ್ಷತೆಯಲ್ಲಿ ಕಲಘಟಗಿ ತಾಲೂಕು, ಮಾರ್ಚ್ 8ರಂದು ಎಸ್.ಎಸ್. ಹರ್ಲಾಪುರ ಅಧ್ಯಕ್ಷತೆಯಲ್ಲಿ ಅಣ್ಣಿಗೇರಿಯಲ್ಲಿ ನವಲಗುಂದ ತಾಲೂಕು ಸಮ್ಮೇಳನ ಹಾಗೂ ಮಾರ್ಚ್ 9ರಂದು ಡಾ. ಕೆ.ಎಸ್. ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ತಾಲೂಕು ಸಮ್ಮೇಳನಗಳ ನಂತರ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಧಾರವಾಡ ತಾಲೂಕು ಗ್ರಾಮೀಣ ಪ್ರದೇಶದಲಿ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಮೋಹನ ನಾಗಮ್ಮನವರ, ಎಲ್.ಐ. ಲಕ್ಕಮ್ಮನವರ, ಎಚ್.ಎಸ್. ಬಡಿಗೇರ, ನಾಗಪ್ಪ ತಿರ್ಲಾಪುರ, ಪ್ರೇಮಾ ಅರಟ್ಟಿ, ಗುರುಮೂರ್ತಿ ಯರಗಂಬಳಿಮಠ, ಕಾಶಪ್ಪ ದೊಡವಾಡ, ಇದ್ದರು.