ಹಮಾಲಿ ಕಾರ್ಮಿಕರ 4ನೇ ರಾಜ್ಯ ಸಮ್ಮೇಳನ
ಹುಬ್ಬಳ್ಳಿ: ಹಮಾಲಿ ಕಾರ್ಮಿಕರ 4ನೇ ರಾಜ್ಯ ಸಮ್ಮೇಳನ ನಗರದಲ್ಲಿ ಮಾ. 4 ಹಾಗೂ 5ರಂದು ಆಯೋಜಿಸಲಾಗಿದೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ನ ರಾಜ್ಯಾಧ್ಯಕ್ಷ ಮಹೇಶ ಪತ್ತಾರ, ಇಂದಿರಾಗಾಜಿನ ಮನೆ ಬಳಿಯ ಆರ್.ಎನ್. ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಸ್ತುತ ಇರುವ ಕೃಷಿ ಮಾರುಕಟ್ಟೆಗಳನ್ನು ಸುಧಾರಿಸುವ ನೆಪದಲ್ಲಿ ಖಾಸಗೀಕರಣಕ್ಕೆ ಮುಂದಾಗಿವೆ. ಮುಂಗಡ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಭಾಗವಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿವೆ. ಇದರಿಂದ ವ್ಯಾಪಾರಸ್ಥರು, ರೈತರು, ಕಾರ್ಮಿಕರ ಮೇಲಾಗುವ ಪರಿಣಾಮಗಳ ಕುರಿತು ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀ ಮಾ. 4ರಂದು ಮಧ್ಯಾಹ್ನ 12ಕ್ಕೆ ಸಮ್ಮೇಳನ ಉದ್ಘಾಟಿಸುವರು. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಂಕರಪ್ಪ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ, ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದಕ್ಕೂ ಮೊದಲು ಅಂದು ಬೆಳಗ್ಗೆ 11ಕ್ಕೆ ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಇಂದಿರಾಗಾಜಿನ ಮನೆವರೆಗೆ ಮೆರವಣಿಗೆ ನಡೆಯಲಿದೆ. ಮಾ. 5ರಂದು ಬೆಳಗ್ಗೆ 10ಕ್ಕೆ ಪ್ರತಿನಿಧಿ ಅಧಿವೇಶನ ಸಮಾರೋಪ ಸಮಾರಂಭ ಅಮರಗೋಳ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ನಡೆಯುವುದು ಎಂದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ದುರಗಪ್ಪ ಚಿಕ್ಕತುಂಬಳ ಉಪಸ್ಥಿತರಿದ್ದರು.
--
ಹುಬ್ಬಳ್ಳಿ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
ಹುಬ್ಬಳ್ಳಿ: ಕಾಲೇಜಿನಲ್ಲಿ ಕಲಿತ ಪಾಠಗಳು ಅನುಭವಕ್ಕೆ ಬರಬೇಕಾದರೆ ಎನ್‌ಎಸ್‌ಎಸ್ ಶಿಬಿರಗಳಲ್ಲಿ ಪಾಲ್ಗೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅನುಭವಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಪಿ.ಸಿ. ಜಾಬೀನ್ ವಿಜ್ಞಾನ ಮಹಾವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಬಿ. ನಾಡಗೌಡ ಹೇಳಿದರು. ಹುಬ್ಬಳ್ಳಿಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಕಟ್ನೂರು ಗ್ರಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು. ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಬಿ.ಬಿ. ಸಾಣಿಕೊಪ್ಪ ಅವರು, ಜಾನಪದ ಕಲೆಗೆ ಗ್ರಾಮೀಣರ ಕೊಡುಗೆ ಕುರಿತು ಮಾತನಾಡಿದರು. ಇದಕ್ಕೂ ಮುನ್ನ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಂದ ಗ್ರಾಮದಲ್ಲಿ ಏಡ್ಸ್ ಜಾಗೃತಿ ಜಾಥಾ ಜರುಗಿತು.
ಕಾಲೇಜಿನ ದೈಹಿಕ ಶಿಕ್ಷಕ ಟಿ.ಪ್ರಭಾಕರನ್, ಗ್ರಾಮದ ಬಾಬುರಾವ್ ಜಾಧವ, ದೇವೇಂದ್ರಪ್ಪ ಬಡಿಗೇರ, ವಸಂತರಾವ್ ಯಾದವ, ಲಕ್ಷ್ಮಣ ಗರಗ ಇದ್ದರು. ಚೈತ್ರಾ ಕ್ಯಾತರಿ ಪ್ರಾರ್ಥಿಸಿದರು. ಮಹೇಶ ಗೌಡರ ಸ್ವಾಗತಿಸಿದರು. ಸಂತೋಷ ಪಾಟೀಲ ವಂದಿಸಿದರು.