ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಭಕ್ತಪ್ರಿಯ ಸುಖಮುನೇಶ, ಭಜನೆ ಬಸವ

Lingaraj Badiger
Updated On : 28 Feb 2014, 12:03 pm

ಹುಬ್ಬಳ್ಳಿ: ಸ್ವರ್ಗದಲ್ಲಿ ಇಂದ್ರ ಅಪ್ಸರೆಯರು ಮತ್ತು ಸಂಗೀತ ದಿಗ್ಗಜರಿಂದ ಸುಖ-ಭೋಗ ಭಾಗ್ಯಗಳನ್ನು ಅನುಭವಿಸಿದ್ದು ಕೇಳಿದ್ದೇವೆ. ಶ್ರೀ ಕೃಷ್ಣ 16 ಸಾವಿರ ಹೆಂಡಿರಿಂದ ಸುಖ-ಸಂತೋಷದಿಂದ ಇದ್ದಿದ್ದನ್ನು ತಿಳಿದುಕೊಂಡಿದ್ದೇವೆ. ಆದರೆ, ಉತ್ತರ ಕರ್ನಾಟಕದ ವೀರ ಸನ್ಯಾಸಿ ಎನಿಸಿಕೊಂಡು ಮಹಿಳೆಯರ ನೆರಳು ಸೋಕಿಸಿಕೊಳ್ಳಲಾರದ ಭಕ್ತರ ಹಿತ ಕಾಯುವವನು ಈ ಸುಖಮುನೇಶ್ವರ.
ಜೀವನ ಆರಂಭದ ಕಾಲವನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮದ ಶರಭೇಂದ್ರ ಮಠದಲ್ಲಿದ್ದ ಶ್ರೀಗಳು, ಗುರುಗಳ ಇಚ್ಛೆಯಂತೆ ಗದಗಿನ ಶಿವಾನಂದ ಮಠದ ಬಳಿ ತಪಸ್ಸನ್ನು ಕೈಗೊಂಡು ಹುಲ್ಲೂರು ಗ್ರಾಮಕ್ಕೆ ಮರಳಿದರು. ಅಲ್ಲಿಂದ ಭಕ್ತರ ಹಿತ ಕಾಯುವುದೇ ಶ್ರೀಗಳ ಕಾಯಕವಾಯಿತು.
ಪವಾಡ ಪುರುಷ: ಹುಲ್ಲೂರು ಗ್ರಾಮದಲ್ಲಿದ್ದುಕೊಂಡೆ ನಸುಕಿಲೆ ಎದ್ದು ಮಲಪ್ರಭೆ ನದಿಯಲ್ಲಿ ಸ್ನಾನ ಮುಗಿಸಿ ನಿತ್ಯ ಪೂಜೆ-ಕೈಂಕರ್ಯಗಳನ್ನು ಕೈಗೊಳ್ಳುತ್ತಿದ್ದರು. ಪೂಜೆಗೆ ಪ್ರತಿನಿತ್ಯ ಹಾಲು ನೀಡುತ್ತಿದ್ದ ಮೆಣಸಗಿಯವರ ಮನೆಯಲ್ಲಿ ಇದ್ದಕ್ಕಿದ್ದಂತೆ ಹಸು ಹಾಲು ಕೊಡುವುದನ್ನು ನಿಲ್ಲಿಸಿಬಿಟ್ಟಿತು. ವಿಷಯ ತಿಳಿದ ಸುಖಮುನೇಶ್ವರರು ಹಸುವಿದ್ದ ಮನೆಗೆ ತೆರಳಿ ಬಂಜೆ ಹಸುನಿಂದ ಹಾಲು ಕರೆದರು.
ಇಳಿ ವಯಸ್ಸಿಗೆ ಜಾರಿದಂತೆಲ್ಲ ಸಮೀಪದ ಬಿ.ಎಸ್. ಬೇಲೇರಿ ಗ್ರಾಮದಲ್ಲಿ ನೆಲೆಸಿ ಬಳಿಕ ಮಲಪ್ರಭೆ ನದಿಗೆ ತೆರಳಿ ಜನ ನಿದ್ರೆಯಿಂದೇಳುವ ಮುನ್ನ ಸ್ನಾನ ಮಾಡಿ ಗ್ರಾಮದಲ್ಲಿ ಪೂಜಾಕಾರ್ಯ ಕೈಗೊಳ್ಳುತ್ತಿದ್ದರು. ವಿಶೇಷವೆಂದರೆ ಹೆಣ್ಣುಮಕ್ಕಳ ನೆರಳನ್ನು ಸೋಕಿಸಿಕೊಳ್ಳುತ್ತಿರಲಿಲ್ಲ. ಸೋಕಿದರು ಮರಳಿ ಸ್ನಾನ ಮಾಡಿಕೊಂಡು ಪೂಜಾಕಾರ್ಯ ಕೈಗೊಳ್ಳುತ್ತಿದ್ದರು.
ಬೇಲೇರಿಯ ನಿಂಗನಗೌಡ ಪಾಟೀಲರ ಮನೆಯಿಂದ ಪೂಜೆಗೆ ನಿತ್ಯ ಹಾಲು ತರಿಸಿಕೊಳ್ಳುತ್ತಿದ್ದರು. ಗೌಡತಿ ಹಾಲು ಕೊಡಲು ನಿರಾಕರಿಸಿದಳು. ಆಗ ಹಸುವಿನಲ್ಲಿ ಹಾಲು ಬರದೇ ರಕ್ತಸ್ರಾವ ಹರಿಯಲಿ ಎಂದು ಶಾಪವಿತ್ತರು. ಇದರಿಂದಾಗಿ ಹಸು ಸಾಯುವರೆಗೂ ಹಾಲು ಕೊಡಲಿಲ್ಲ. ಮತ್ತೊಮ್ಮೆ ಶಿಷ್ಯಂದಿರೊಂದಿಗೆ ಶಿವಯೋಗ ಮಂದಿರಕ್ಕೆ ಭಜನೆ ತೆಗೆದುಕೊಂಡು ಹೋದಾಗ ಹುಲಿ ಅಡ್ಡಗಟ್ಟಿತ್ತು. ಆಗ ಹುಲಿ ಪಳಗಿಸಿ ಕಾಡಿಗೆ ಬಿಟ್ಟಿದ್ದಾರೆಂದು ಗ್ರಾಮದಲ್ಲಿನ ಶಿಷ್ಯಂದಿರ ಅಭಿಪ್ರಾಯ. ಬಳಿಕ ಶ್ರೀಗಳು 16 ಫೆ. 1961ರಲ್ಲಿ ಬೇಲೇರಿ ಗ್ರಾಮದಲ್ಲಿ ಲಿಂಗೈಕ್ಯರಾದರು.
ಪುಣ್ಯಾಶ್ರಮಕ್ಕೆ ಗ್ರಾಮದ ಅಳಿಲು ಸೇವೆ: ಅಂಧರ ಬಾಳಿನ ಆಶಾಕಿರಣ ಪುಟ್ಟರಾಜ ಗವಾಯಿಗಳು ಜೀವಿತಾವಧಿಯಲ್ಲಿ ಶಿವರಾತ್ರಿಗೂ ಮುನ್ನ 15 ದಿನ ಪ್ರತಿವರ್ಷ ಬೇಲೇರಿ ಗ್ರಾಮಕ್ಕೆ ಶಿಷ್ಯಂದಿರೊಂದಿಗೆ ತೆರಳಿ ಪುರಾಣ ಪ್ರವಚನ ಕೈಗೊಳ್ಳುತ್ತಿದ್ದರು. ಅಲ್ಲದೆ, ಪ್ರತಿದಿನ ಗ್ರಾಮದ ಒಂದು ಮನೆಯವರು ಶ್ರೀಗಳ ಪೂಜೆ ನಡೆಸಿಕೊಡುತ್ತಿದ್ದರು. ಅಂದಿನಿಂದ ಇಲ್ಲಿವರೆಗೂ ವೀರೇಶ್ವರ ಪುಣ್ಯಾಶ್ರಮಕ್ಕೆ ಪ್ರತಿವರ್ಷ 25 ಚೀಲ ಬಿಳಿಜೋಳ, 15 ಚೀಲ ಗೋದಿ ಕೊಡ ಮಾಡಲಾಗುತ್ತದೆ.
ಪ್ರಸಿದ್ಧ ಭಜನಾ ಸಂಘ: ನಾಡಿನ ಪ್ರಮುಖ ಉತ್ಸವಗಳಾದ ದಸರಾ, ಹಂಪಿ, ಲಕ್ಕುಂಡಿ, ಚಾಲುಕ್ಯ, ಕದಂಬ, ಕರಾವಳಿ ಇನ್ನಿತರ ಉತ್ಸಗಳಲ್ಲಿ ಬೇಲೇರಿಯ ಶ್ರೀ ಸುಖಮುನೇಶ್ವರ ಯುವಕ ಭಜನಾ ಮಂಡಳಿ ಭಾಗಿಯಾಗುತ್ತದೆ. ಈ ಯುವಕರ ತಂಡ ಭಜನೆ ಮತ್ತು 15ಕ್ಕೂ ಹೆಚ್ಚು ಹೆಜ್ಜೆಮೇಳವನ್ನು 'ಭಜನೆ ಬಸವ' (ಹಸು)ನೊಂದಿಗೆ ಹೆಜ್ಜೆಹಾಕಿ ರಂಜಿಸುತ್ತದೆ. ಭಜನಾ ಸಂಘ 2007ರಲ್ಲಿ ಮೈಸೂರು ಜಿಲ್ಲೆ ಸುತ್ತೂರು ದೇಶಿಕೇಂದ್ರದ ಶಿವರಾತ್ರಿಶ್ವರ ಶಿವಯೋಗಿಗಳ ಮಠದಿಂದ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ, ಗದಗ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮತ್ತಿತರೆಡೆ ಭಜನೆ ಹೆಜ್ಜೆಮೇಳದೊಂದಿಗೆ ನಾಡಿನ ಜನತೆಯ ಆಕರ್ಷಣೆ ಕೇಂದ್ರಬಿಂದು.
ಭಜನೆ ಬಸವ: ಬೇಲೇರಿ ಗ್ರಾಮದ ಭಜನೆ ನಾಡಿನೆಲ್ಲೆಡೆ ಚಿರಪರಿಚಿತ ಅದಕ್ಕೆ ಕಾರಣ ಭಜನೆ ಬಸವ. ಭಜನೆ, ಹೆಜ್ಜೆಮೇಳದೊಂದಿಗೆ ಬಸವ ಯುವಕರ ಜೊತೆ ಹೆಜ್ಜೆ ಹಾಕುತ್ತದೆ. ಅಲ್ಲದೆ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತದೆ. ಟ್ರ್ಯಾಕ್ಟರ್ ಟೇಲರ್‌ನ್ನು ಸ್ವ ಇಚ್ಛೆಯಿಂದ ಹತ್ತುವುದು, ಹೆಜ್ಜೆಹಾಕುತ್ತಾ ಅಡ್ಡ ಮಲಗಿದ ಯುವಕರನ್ನು ದಾಟುವುದು, ಅವರೊಡನೆ ಹೆಜ್ಜೆ ಹಾಕುವುದು ಇದರ ವೈಶಿಷ್ಟ್ಯ.
-ಉಮೇಶ ಯ. ಸಜ್ಜನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement