ಭರವಸೆಯ ಸಾಹಿತ್ಯ ಅಗತ್ಯ
ಹುಬ್ಬಳ್ಳಿ: ಮನಸ್ಸಿಗೆ ಮುದ ನೀಡುವುದರೊಂದಿಗೆ ವೈಚಾರಿಕ ಚಿಂತನೆಗೆ ಒಳಪಡಿಸಿ, ಸಮಾಜದಲ್ಲಿಯ ದ್ವಂದ್ವಗಳಿಗೆ ಕನ್ನಡಿ ಹಿಡಿಯುವ ಕಾರ್ಯ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷರೂ ಆಗಿರುವ ಅಥಣಿ ಮೊಟಗಿ ಮಠಾಧೀಶರಾದ ಪ್ರಭು ಚನ್ನಬಸವಶ್ರೀ ಅಭಿಪ್ರಾಯಪಟ್ಟರು. ಕರ್ನಾಟಕ ಚುಟುಕು ಪರಿಷತ್ತು ಆಶ್ರಯದಲ್ಲಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 'ಪೀಠಾರೋಹಣ : ಚುಟುಕು ಸಿಂಚನ' ಸಮಾರಂಭದಲ್ಲಿ 'ಚುಟುಕು ಭೂಷಣ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಗೊಂದಲದಲ್ಲಿರುವ ಸಮಾಜ ಇಂದು ಜನಪರ ಕಾಳಜಿ, ಪ್ರೀತಿ, ವಿಶ್ವಾಸದತ್ತ ನೋಡುತ್ತಿದೆ. ಭರವಸೆ ಮೂಡಿಸುವ ಸಾಹಿತ್ಯವಿಂದು ಅಗತ್ಯ. ಕವಿಗಳ ಮೇಲೆ ಗುರುತರ ಹೊಣೆಗಾರಿಕೆ ಇದೆ. ಮೋಜು-ಮಸ್ತಿ ಸಾಹಿತ್ಯದ ವಿಷಯವಾಗಬಾರದು. ಚಿಂತನಶೀಲ ಸಾಹಿತ್ಯ ಬರಬೇಕು ಎಂದು ಸಲಹೆ ನೀಡಿದರು. ಇದಕ್ಕೂ ಮೊದಲು ರಾಜಧಾನಿ ಕಾಲೋನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಿರೇಮಠ ಹಾಗೂ ಸದಸ್ಯರು ಶ್ರೀಗಳನ್ನು ಸನ್ಮಾನಿಸಿದರು. ಶ್ರೀಗಳ ಬದುಕು-ಬರಹ ಕುರಿತು ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು. ಹಿರಿಯ ಕವಿ ಎಂ.ಡಿ. ಗೋಗೇರಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಾಲ್ವತ್ತು ಜನ ಪಾಲ್ಗೊಂಡಿದ್ದರು. ಚನ್ನಬಸಪ್ಪ ಧಾರವಾಡಶೆಟ್ರು ಸ್ವಾಗತಿಸಿದರು. ಮಂಜುಳಾ ನಾಮದೇವ ನಿರೂಪಿಸಿದರು. ಕೃಷ್ಣಮೂರ್ತಿ ಕುಲಕರ್ಣಿ ವಂದಿಸಿದರು.