ಮಾರ್ಚ್ ಅಂತ್ಯದೊಳಗೆ ಕಬ್ಬು ಸಾಗಣೆ
ಕಲಘಟಗಿ: ಮಾರ್ಚ್ ತಿಂಗಳ ಅಂತ್ಯದೊಳಗಾಗಿ ತಾಲೂಕಿನಲ್ಲಿ ಬೆಳೆಯಲಾಗಿರುವ ಕಬ್ಬು ಬೆಳೆಯನ್ನು ಸಾಗಾಟ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹಳಿಯಾಳ ಫ್ಯಾರಿ ಶುಗರ್ ಕಾರ್ಖಾನೆಯ ಮುಖ್ಯವ್ಯವಸ್ಥಾಪಕ ಕಣ್ಣನ್ ಭರವಸೆ ನೀಡಿದರು. ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಕಣ್ಣನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ರೈತರು, ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಫ್ಯಾಕ್ಟರಿಯ ಕೆಲ ಅಧಿಕಾರಿಗಳು, ನೌಕರರು ರೈತರಿಂದ ಲಂಚ ಪಡೆಯುತ್ತಿದ್ದಾರೆಂದು ದೂರಿದರು. ರೈತರಿಂದ ಕೇಳಿಬಂದ ಸಾರ್ವತ್ರಿಕ ಆರೋಪದಿಂದ ಆಕ್ರೋಶಗೊಂಡ ಕಣ್ಣನ್, ಕಾರ್ಖಾನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಆರೋಪ ಕೇಳಿ ಬಂದಲ್ಲಿ ಆಯಾ ನೌಕರರ ವೇತನದಿಂದ ರೈತರಿಂದ ಪಡೆದ ಹಣ ಭರಿಸಲಾಗುವುದೆಂದೂ ಎಚ್ಚರಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎನ್. ಬನವಣ್ಣವರ ಮಾತನಾಡಿ, ಕಬ್ಬು ಬೆಳೆಗಾರರು ಹತ್ತು ಹಲವಾರು ಸಮಸ್ಯೆಗಳ ಮಧ್ಯೆಯೂ ಕಬ್ಬು ಬೆಳೆಯನ್ನು ಬೆಳೆದರು ಸೂಕ್ತ ಸಮಯದಲ್ಲಿ ಸಾಗಾಟ ಮಾಡದೇ ಇರುವುದರಿಂದ ಶೇ. 50 ರಷ್ಟು ಬೆಳೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿ ಕಣ್ಣನ್, ಕಬ್ಬು ಸಾಗಾಟಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಉಳವಪ್ಪ ಬಳಿಗೇರ, ಮೋಹನ ಪಂಡಿತ, ಸುರೇಶ ಅರ್ಕಸಾಲಿ, ವೀರುಪಾಕ್ಷ ಅಂಗಡಿ, ಫ್ಯಾರಿ ಶುಗರ್ಸ್ ವಲಯದ ಎಸ್.ಎಂ. ಪಾಟೀಲ, ರಮೇಶ ರೆಡ್ಡಿ, ಚಂದ್ರಗೌಡ ಪಾಟೀಲ, ತಹಸೀಲ್ದಾರ ಕೆ.ಆರ್. ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
--
ಮಾ. 2ರಿಂದ ಸಾಂಬಾರುಬೆಳೆಗಳ ವ್ಯಾಪಾರ ಮೇಳ
ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಮಾ. 2, 3 ಹಾಗೂ 4ರಂದು ಸಾಂಬಾರು ಬೆಳೆಗಳ ವ್ಯಾಪಾರ ಮೇಳ-2014 ಹಮ್ಮಿಕೊಳ್ಳಲಾಗಿದೆ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಧಾರವಾಡದ ತೋಟಗಾರಿಕೆ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳಿ ಸಹಯೋಗದೊಂದಿಗೆ ಏರ್ಪಡಿಸಿರುವ ಈ ಮೇಳದಲ್ಲಿ ಸಾಂಬಾರು ಬೆಳೆಗಳಾದ ಮೆಣಸಿನಕಾಯಿ, ಹವೀಜ, ಬಳ್ಳೊಳ್ಳಿ, ಯಾಲಕ್ಕಿ, ಲವಂಗ, ಕಾಳಮೆಣಸು, ಶುಂಠಿ, ಜಾಜಿಕಾಯಿ, ದಾಲಚಿನ್ನಿ ಮತ್ತಿತರ ಬೆಳಗಳನ್ನು ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಬೆಳೆ ಉತ್ಪಾದನೆಗೆ ತಾಂತ್ರಿಕ ಮಾಹಿತಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಪಡೆಯಬಹುದು. ರಾಜ್ಯ ಸರ್ಕಾರದ ವಿನೂತನ ತಂತ್ರಜ್ಞಾನವಾದ ಸಾಂಬಾರು ಬೆಳೆಗಳ ಇ-ಮಾರಾಟ ವ್ಯವಸ್ಥೆಯನ್ನು ರೈತರಿಗೆ ಮತ್ತು ಗ್ರಾಹಕರಿಗೆ ಇದೇ ಸಂದರ್ಭದಲ್ಲಿ ಪರಿಚಯಿಸಲಾಗುವುದು. ರಾಜ್ಯ ಸಾಂಬಾರು ಮಂಡಳಿಯ 'ಕಾರ್ ಸ್ಪೈಸ್' ಲಾಂಛನವನ್ನು ಬಿಡುಗಡೆಗೊಳಿಸಲಾಗುವುದು. ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ತೋಟಗಾರಿಕೆ ಸಚಿವ ಶಾಮನೂರ ಶಿವಶಂಕರಪ್ಪ ಮೇಳ ಉದ್ಘಾಟಿಸುವರು. ಮಾಹಿತಿಗೆ ದೂ. 2218234/35 ಅಥವಾ ಮೊಸಂ 9448801306 ಸಂಪರ್ಕಿಸಬಹುದು.