ಮೇಯರ್-ಉಪಮೇಯರ್ ಚುನಾವಣೆ ಮಾ. 7ಕ್ಕೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 27
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಮಾ. 7ಕ್ಕೆ ಚುನಾವಣೆ ನಡೆಯಲಿದೆ.
ಮೂಲಗಳ ಪ್ರಕಾರ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಮಾ. 7ಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.
ಈ ಮಧ್ಯೆ ಲೋಕಸಭೆಗೆ ಚುನಾವಣೆ ಘೋಷಣೆಗೊಂಡು ಚುನಾವಣೆ ನೀತಿ ಸಂಹಿತೆ ಜಾರಿಯಾದರೂ ಮೇಯರ್-ಉಪ ಮೇಯರ್ ಚುನಾವಣೆಗೆ ಯಾವುದೇ ಅಡ್ಡಿ ಇಲ್ಲವೆಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.
ಲೋಕಸಭೆಗೆ ಚುನಾವಣೆ ಘೋಷಣೆಯಾದಲ್ಲಿ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು ಮತ ಚಲಾಯಿಸುವಂತಿಲ್ಲ. ಮಾ. 7ರೊಳಗೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಹಿನ್ನಡೆಯಾದಂತೆಯೇ. ಚುನಾವಣೆ ನೀತಿ ಸಂಹಿತೆ ಜಾರಿಗೊಂಡಲ್ಲಿ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ಈ ಅವಧಿಯೊಳಗೆ ಲೋಕಸಭೆಗೆ ಚುನಾವಣೆ ಘೋಷಣೆಯಾಗದಿದ್ದಲ್ಲಿ ಮಾತ್ರ ಸಂಸದ ಪ್ರಹ್ಲಾದ ಜೋಶಿ ಅವರು ಮೇಯರ್-ಉಪ ಮೇಯರ್ ಆಯ್ಕೆಯಲ್ಲಿ ತಮ್ಮ ಹಕ್ಕು ಚಲಾಯಿಸಬಹುದು.
ಮಂಗಳೂರು ಹೊರತು ಪಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಚೇರಿಯಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ಚುನಾವಣೆ ನಡೆಸುವ ಕುರಿತು ಈಗಾಗಲೇ ಸೂಚನೆ ತಲುಪಿದೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಮಾ. 7ಕ್ಕೆ ಒಂದು ವರ್ಷ ಗತಿಸುತ್ತಿದ್ದು, ಇದೇ ದಿನದಂದು ಹುಬ್ಬಳ್ಳಿ-ಧಾರವಾಡ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಲೆಕ್ಕಾಚಾರ: ಹು-ಧಾ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗ ಹಾಗೂ ಉಪ ಮೇಯರ್ ಸ್ಥಾನಕ್ಕೆ ಪ.ಪಂಗಡ ಮಹಿಳೆ ಮೀಸಲಾತಿ ಪ್ರಕಟಗೊಂಡಿದೆ. ಪಾಲಿಕೆಯ ಎಲ್ಲ ಪಕ್ಷಗಳಲ್ಲಿ ಪ.ಪಂಗಡಕ್ಕೆ ಸೇರಿದ ಮಹಿಳೆ ಇರುವುದು ವಾರ್ಡ್ ಸಂಖ್ಯೆ 22ರ ಬಿಜೆಪಿ ಸದಸ್ಯೆ ಮಂಜುಳಾ ಅಕ್ಕೂರ ಅವರೊಬ್ಬರೇ. ಆದಕಾರಣ ಪಾಲಿಕೆಯಲ್ಲಿ ಯಾವುದೇ ಪಕ್ಷ ಅಸ್ತಿತ್ವಕ್ಕೆ ಬಂದರೂ ಬಿಜೆಪಿಗೆ ಉಪ ಮೇಯರ್ ಸ್ಥಾನ ಖಚಿತ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 33 ಸ್ಥಾನ ಹೊಂದಿರುವ ಬಿಜೆಪಿ, 24ನೇ ವಾರ್ಡಿನ ಪಕ್ಷೇತರ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಬೆಂಬಲದಿಂದ 34 ಸ್ಥಾನಗಳನ್ನ್ನು ಪಡೆದಿದೆ. ಇದರೊಂದಿಗೆ 50ನೇ ವಾರ್ಡ್‌ನ ಕೆಜೆಪಿ ಸದಸ್ಯೆ ಲಕ್ಷ್ಮೀಬಾಯಿ ಬಿಜವಾಡ ಅವರ ಬೆಂಬಲವೂ ಈಗಾಗಲೇ ಬಿಜೆಪಿಗೆ ದೊರಕಿದೆ. ಶಾಸಕರಾದ ಜಗದೀಶ ಶೆಟ್ಟರ ಹಾಗೂ ಅರವಿಂದ ಬೆಲ್ಲದ ಮತಗಳಿಂದ ಒಟ್ಟು 37 ಸ್ಥಾನಗಳನ್ನು ಬಿಜೆಪ್ನಿ ಪಡೆದುಕೊಳ್ಳುತ್ತದೆ. ಈ ಅವಧಿಯೊಳಗೆ ಲೋಕಸಭೆಗೆ ಚುನಾವಣೆ ಘೋಷಣೆಗೊಳ್ಳದಿದ್ದರೆ ಸಂಸದ ಪ್ರಹ್ಲಾದ ಜೋಶಿ ಅವರ ಮತವೂ ಬಿಜೆಪಿಗೆ ಬಲ ನೀಡುವುದರಿಂದ ಆ ಪಕ್ಷದ ಮತಗಳ ಸಂಖ್ಯೆ 38ಕ್ಕೆ ತಲುಪುತ್ತದೆ. ಒಂದು ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಲ್ಲಿ ಸಂಸದ ಜೋಶಿ ಮತದಾನ ಮಾಡಲು ಸಾಧ್ಯವಿಲ್ಲ. ಆಗ ಪಕ್ಷದ ಬಲ 37ಕ್ಕೆ ನಿಲ್ಲುತ್ತದೆ. ಇನ್ನೂ 22 ಸದಸ್ಯರನ್ನ್ನು ಹೊಂದಿರುವ ಕಾಂಗ್ರೆಸ್ ಶಾಸಕರಾದ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಮತಗಳಿಂದ 27 ಸ್ಥಾನ ಪಡೆಯಲಿದೆ. 63ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಮಕ್ತುಮಸಾಬ ಯರಗಟ್ಟಿ ಬೆಂಬಲ ಕಾಂಗ್ರೆಸ್‌ಗೆ ಬಹುತೇಕ ನಿಶ್ಚಯವಾಗಿರುವುದರಿಂದ ಆ ಪಕ್ಷದ ಬಲ 28ಕ್ಕೇರಲಿದೆ.
9 ಸದಸ್ಯರಿರುವ ಜೆಡಿಎಸ್ ಸದಸ್ಯರ ಜೊತೆಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಮತವೂ ಪರಿಗಣಿಸಲ್ಪಡುತ್ತದೆ. ಹೀಗಾಗಿ ಪಾಲಿಕೆಯಲ್ಲಿ ಜೆಡಿಎಸ್‌ನ ಮತಗಳ ಸಂಖ್ಯೆ ಒಟ್ಟು 10.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಕೆಯಲ್ಲಿನ ತಮ್ಮ ಸಂಖ್ಯಾ ಬಲದ ಆಧಾರದ ಮೇಲೆ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಹಕ್ಕು ಮಂಡಿಸಲಿವೆ. ಉಪ ಮೇಯರ್ ಸ್ಥಾನವಂತೂ ಈಗಾಗಲೇ ಬಿಜೆಪಿ ತೆಕ್ಕೆಗೆ ಹೋಗಿದ್ದು, ಮೇಯರ್ ಸ್ಥಾನ ಯಾವ ಪಕ್ಷಕ್ಕೆ ಒಲಿಯುವುದೆಂದು ಕಾದು ನೋಡಬೇಕಿದೆ.