ಶಿವರಾತ್ರಿ: ಶಿವಮಯವಾಯ್ತು ಹುಬ್ಬಳ್ಳಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 27
ಮಹಾಶಿವರಾತ್ರಿ ಅಂಗವಾಗಿ ನಗರದ ಶಿವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ-ಪುನಸ್ಕಾರಗಳು ನಡೆದವು. ಶ್ರೀ ಸಿದ್ಧಾರೂಢ ಮಠ, ಸ್ಟೇಶನ್ ರಸ್ತೆಯ ಶಿವಾಲಯ, ಹಳೇ ಹುಬ್ಬಳ್ಳಿಯ ಶಿವಮಂದಿರ, ಕೇಶ್ವಾಪುರದ ಶಿವ ದೇವಾಲಯ ಸೇರಿದಂತೆ ವಿವಿಧ ಶಿವಮಂದಿರಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಶಿವಲಿಂಗ ದರ್ಶನ ಪಡೆದರು. ಕುಟುಂಬ ಸಮೇತ ಶಿವಾಲಯಗಳಿಗೆ ತೆರಳಿದ ಭಕ್ತರು ಶಿವಲಿಂಗಕ್ಕೆ ಹಾಲೆರೆದರು. ಬೆಳಗ್ಗೆಯಿಂದ ರಾತ್ರಿಯವರೆಗೂ ಶಿವಾಲಯಗಳು ಹೌಸ್ಫುಲ್ ಆಗಿದ್ದವು. ಉದ್ದನೆಯ ಸಾಲಿನಲ್ಲಿ ನಿಂತು ಭಕ್ತರು ಶಿವನಿಗೆ ವಿಶೇಷ ಪೂಜೆ, ಅಭಿಷೇಕ, ಪ್ರಾರ್ಥನೆ ಸಲ್ಲಿಸಿ ಭಕ್ತಿ ಪೂರ್ವಕವಾಗಿ ಶಿವರಾತ್ರಿ ಆಚರಿಸಿದರು.
ಮಧ್ಯಾಹ್ನವಾಗುತ್ತಿದ್ದಂತೆ ಶಿವನ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತ ಹೋಯಿತು. ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಜನರು ಬೆಳಗ್ಗೆಯೇ ಶಿವಮಂದಿರಕ್ಕೆ ತೆರಳುತ್ತಿರುವುದೂ ಕಂಡುಬಂದಿತು. ಶಿವರಾತ್ರಿಯ ಹಿನ್ನೆಲೆಯಲ್ಲಿ ಸುಣ್ಣ ಬಣ್ಣ ಬಳಿದು, ತಳಿರು ತೋರಣ, ವಿದ್ಯುದ್ದೀಪ, ಪೆಂಡಾಲಗಳಿಂದ ಶಿವ ಮಂದಿರಗಳನ್ನು ಶೃಂಗರಿಸಲಾಗಿತ್ತು.
ನಗರದ ಪುರಾತನ ಶಿವಾಲಯವಾದ ಸ್ಟೇಷನ್ ರಸ್ತೆಯ ಈಶ್ವರ ಗುಡಿಯಲ್ಲಿ ಬೆಳಗಿನಜಾವ ಸುಮಾರು 5.30ರಿಂದಲೇ ಭಕ್ತರು ಸೇರಿದ್ದರು. ಇಲ್ಲಿ ಭಕ್ತರಿಗೆ ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿ ಶಿವಲಿಂಗ ಮುಟ್ಟಿ ನಮಸ್ಕರಿಸಲು ಹಾಗೂ ಅಭಿಷೇಕ ಮಾಡಲು ಅವಕಾಶವಿರುವುದರಿಂದ ಶಿವರಾತ್ರಿಯಂದು ನಗರದ ಮೂಲೆ ಮೂಲೆಯಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಶಿವಲಿಂಗದ ಮೇಲೆ ಬಿಲ್ವ ಪತ್ರೆ ಇಟ್ಟು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮಾಡಿ ನಮಸ್ಕರಿಸಿದರು. ಗೋಕುಲ ರಸ್ತೆ ಶಿವಪುತ್ರ ಕಾಲೋನಿಯ ಶಿವನ ಬೃಹತ್ ಮೂರ್ತಿ ಇಂದಿನ ಪ್ರಮುಖ ಆಕರ್ಷಣೆ. 15 ಅಡಿ ಎತ್ತರದ ಪಾಣಿಪೀಠದ ಮೇಲೆ 35 ಅಡಿ ಎತ್ತರದ ಶಿವನ ವಿಗ್ರಹ ಇರುವ ಇದು ರಾಜ್ಯದಲ್ಲಿಯೇ 4ನೇ ಅತಿ ದೊಡ್ಡ ಶಿವನ ವಿಗ್ರಹ. ಭಕ್ತರಿಗೆ ಖುದ್ದು ಬೃಹತ್ ಶಿವನಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕೇಶ್ವಾಪುರದ ಈಶ್ವರ ಗುಡಿ, ಹೊಸ ಹುಬ್ಬಳ್ಳಿ ಕಿಲ್ಲೆಯ ಉಮಾ ಮಹೇಶ್ವರ ಗುಡಿ ಸೇರಿದಂತೆ ನಗರದ ವಿವಿಧೆಡೆ ಭಕ್ತಿಪೂರ್ವಕ ಶಿವರಾತ್ರಿ ಆಚರಣೆ ಕಂಡುಬಂದಿತು. ಸಿದ್ಧಾರೂಢ ಮಠದಲ್ಲಿಯೂ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು. ಮೂರ್ತಿ- ಗದ್ದುಗೆಗಳ ದರ್ಶನಕ್ಕೆ ಉದ್ದನೆಯ ಸಾಲು ಇತ್ತು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಂಗಳಾರುತಿ, ವಿಶೇಷ ಪೂಜೆಗಳು ನಿರಂತರವಾಗಿ ನಡೆದವು.
ಭಕ್ತಿಯಲ್ಲಿ ಮಿಂದೆದ್ದ ಧಾರವಾಡಿಗರು
ಧಾರವಾಡ: ಶಿವ ಶಿವ ಎಂದರೆ ಭಯವಿಲ್ಲ... ಶಿವನಾಮಕ್ಕೆ ಸಾಟಿ ಬೇರೆ ಇಲ್ಲ... ಎಂದು ಶಿವನ ಆರಾಧನೆಯಲ್ಲಿ ಗುರುವಾರ ಧಾರವಾಡ ನಗರ ನಿವಾಸಿಗಳು ಮಿಂದೆದ್ದರು. ಇಲ್ಲಿಯ ಎಲ್ಲ ಶಿವನ ದೇವಸ್ಥಾನಗಳು ಭಕ್ತರ ಭಕ್ತಿಯ ಪರಾಕಾಷ್ಠೆಯಲ್ಲಿ ತುಂಬಿ ತುಳುಕುತ್ತಿತ್ತು. ಭಕ್ತರು ಶಿವನಿಗೆ ಇಷ್ಟವಾದ ಬಿಲ್ವಪತ್ರೆ, ಎಕ್ಕೆ ಹೂವನ್ನು ಹಿಡಿದು ಸರದಿಯ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವ ದೃಶ್ಯ ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿತ್ತು. ಅಧ್ಯಾತ್ಮದ ತವರಾದ ಭಾರತದಲ್ಲಿ ಶಿವರಾತ್ರಿಯಂತಹ ಹಬ್ಬಗಳ ಪರಂಪರೆ ಅನಾದಿ ಕಾಲದಿಂದಲೂ ಬೆಳೆದು ಬಂದಿದೆ. ಈ ಅಧ್ಯಾತ್ಮದ ಹೆಸರಿನಲ್ಲಿ ಮೌಢ್ಯ, ಕಂದಾಚಾರಗಳು ನಡೆಯುತ್ತಿದ್ದರೂ ಬಹುಪಾಲು ಜನತೆ ಅಧ್ಯಾತ್ಮದ ಸಂಸ್ಕೃತಿಗೆ ಒಗ್ಗಿದ್ದಾರೆ. ಹಾಗೆಯೇ ಶಿವನ ಆರಾಧನೆಗೆಂದು ಇರುವ ಈ ಶಿವರಾತ್ರಿಯನ್ನು ಎಲ್ಲರೂ ಭಕ್ತಿ ಭಾವದಿಂದ ಆಚರಿಸುತ್ತಿರುವ ಸನ್ನಿವೇಶ, ಶಿವನ ಭಕ್ತಿಯ ಹಾಡುಗಳು ರೋಮಾಂಚನಗೊಳಿಸುವಂತಿತ್ತು. ಬೆಳಗ್ಗೆಯಿಂದ ಶಿವನ ಆರಾಧಕರು ಉಪವಾಸ ಮಾಡಿ, ಶಿವನ ದರ್ಶನ ಪಡೆಯಲು ಶಿವ ದೇವಸ್ಥಾನಗಳಿಗೆ ಹೋಗುವ ದೃಶ್ಯವೇ ಗೋಚರವಾಗುತ್ತಿತ್ತು. ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಜರುಗಿತು.
ಧಾರವಾಡದ ಶಿವನ ಪ್ರಮುಖ ದೇವಸ್ಥಾನಗಳಾದ ಸೋಮೇಶ್ವರ, ಶಿವಾಲಯ, ಗಾಂಧಿನಗರ ಈಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಿಗಳಲ್ಲಿ ಭಕ್ತರು ಕುಟುಂಬ ಸಮೇತ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರು ಶಿವನ ಮೂರ್ತಿಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿ ಕೊನೆಗೆ ಕಡಪಾ ಮೈದಾನದಲ್ಲಿ ಅಂತ್ಯಗೊಳಿಸಿದರು. ಭಕ್ತರಿಗೆ ಮಾದರಿ ಸೋಮೇಶ್ವರ ದೇವಸ್ಥಾನದ ದರ್ಶನ ನೀಡಿದರು. ಇಲ್ಲಿಗೆ ಸಮೀಪದ ಸೋಮೇಶ್ವರ ದೇವಸ್ಥಾನದಲ್ಲಂತೂ ಬೆಳಗ್ಗೆ 6 ರಿಂದಲೇ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಬಿಸಿಲನ್ನು ಲೆಕ್ಕಿಸದೆ ಶಿವನ ದರ್ಶನ ಪಡೆದರು. ಜಾಗರಣೆಗಾಗಿ ಶಿವನ ಆರಾಧನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿವರಾತ್ರಿ ನಿಮಿತ್ತ ಅನೇಕ ದೇವಸ್ಥಾನಗಳಲ್ಲಿ ರಾತ್ರಿ ಜಾಗರಣೆಗಳನ್ನು, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.