ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹೊಣೆಗಾರಿಕೆ ಅರಿತು ಶಿಕ್ಷಕರು ಪಾಠ ಮಾಡಲಿ

Lingaraj Badiger
Updated On : 28 Feb 2014, 11:57 am

ಧಾರವಾಡ: ಶಿಕ್ಷಕರು ಮೌಲ್ಯಯುತ ಜ್ಞಾನ ನೀಡಲು ಹೊಣೆಗಾರಿಕೆ ಅರಿತು ನಡೆಯಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ಅಗಡಿ ಹೇಳಿದರು.
ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜವಾಬ್ದಾರಿ ನಿರ್ವಹಿಸಲು ಸ್ಥಳೀಯ ಪ್ರಾಧಿಕಾರಗಳ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗುಣಮಟ್ಟದ ಶಿಕ್ಷಣಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದನ್ನು ಅರಿತು ಶಿಕ್ಷಕ ಕೂಡ ನಡೆಯಬೇಕು. ಖಾಸಗಿ ಸಂಸ್ಥೆಗಳಿಗಿಂತಲೂ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳನ್ನು ಹೊಂದಿವೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ಪ್ರಾಮಾಣಿಕವಾಗಿ, ನಿಜವಾದ ಫಲಾನುಭವಿಗಳಿಗೆ ಸಿಗುವಂತೆ ಶಿಕ್ಷಣ ಅಧಿಕಾರಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು. ಜಿಪಂ ಸಿಇಓ ಪಿ.ಎ. ಮೇಘಣ್ಣವರ ಮಾತನಾಡಿ, ಹೆಚ್ಚಿನ ಶಾಲೆಗಳು ಸರ್ಕಾರ ನಿಗದಿ ಪಡಿಸಿದ ಉಚಿತ ಶಿಕ್ಷಣದ ಕಾಯ್ದೆಯಡಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಂಬಂಧಪಟ್ಟ ಆಯಾ ಪ್ರದೇಶದ ಕೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಿಕ್ಷಣದ ಹಕ್ಕು ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕನ್ನವರ, ಸದಸ್ಯ ಎಲ್.ಜಿ. ಬಾಲಣ್ಣವರ, ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್ ಮತ್ತಿತರರಿದ್ದರು.
--
ನೈಸರ್ಗಿಕ ಚಟುವಟಿಕೆಯಿಂದಲೂ ಅವಕಾಶ ವಂಚಿತ

ಹುಬ್ಬಳ್ಳಿ: ಸಂಶೋಧನೆಗಳ ಪರಿಣಾಮವಾಗಿ ಮಾರುಕಟ್ಟೆಗೆ ಬರುತ್ತಿರುವ ಉತ್ಪನ್ನಗಳಿಂದ ಮನುಷ್ಯನ ಕೆಲವು ನೈಸರ್ಗಿಕ ಚಟುವಟಿಕೆಗಳಿಂದ ಕೂಡ ಮನುಷ್ಯ ಅವಕಾಶ ಕಳೆದುಕೊಳ್ಳುತ್ತಿದ್ದಾನೆ ಎಂದು ನ್ಯಾಷನಲ್ ಲಾ ಸ್ಕೂಲ್‌ನ  ಪ್ರೊ. ಎಂ.ಕೆ. ರಮೇಶ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಬುಧವಾರ ಪರಿಸರ ಆಡಳಿತ ವ್ಯವಸ್ಥೆಯಲ್ಲಿ ಬೆಳವಣಿಗೆಗಳು ಮತ್ತು ಆಯಾಮಗಳು ಕುರಿತ ಅವರು ಉಪನ್ಯಾಸ ನೀಡಿದರು. ನೈಸರ್ಗಿಕ ಚಟುವಟಿಕೆಗಳಿಗೂ ಅವಕಾಶ ಕಳೆದುಕೊಳ್ಳುತ್ತಿರುವ ಮನುಷ್ಯ ಅನಾರೋಗ್ಯ, ಅಸ್ತವ್ಯಸ್ತ ಜೀವನ ಮತ್ತು ಕಡಿಮೆ ಆಯುಷ್ಯದಂತಹ ನಾನಾ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾನೆ. ಪ್ರಸ್ತುತ ದಿನಮಾನದಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಕೃತ್ಯಗಳನ್ನ್ನು ಅಪಕೃತ್ಯ ಅಥವಾ ದಿವಾಣಿ ಸ್ವರೂಪದ ಕೃತ್ಯಗಳಿಗಿಂತ ತೀವ್ರವಾಗಿ ಪರಿಗಣಿಸಲಾಗುತ್ತಿದೆ ಎಂದರು. ಆದ್ದರಿಂದ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಕೃತ್ಯಗಳನ್ನು ಬಗೆಹರಿಸಲು ಇರುವ ಪರಿಸರ ಕಾನೂನಿನ ವ್ಯಾಜ್ಯ ಪರಿಹಾರ ವ್ಯವಸ್ಥೆಯು ಹೊಸ ಆಯಾಮ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಕುಲಪತಿ ಪ್ರೊ. ಟಿ. ಆರ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಿ.ಎಸ್.  ಪಾಟೀಲ, ಡೀನ್ ಮತ್ತು ನಿರ್ದೇಶಕರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ ಹಾಗೂ ಕಾನೂನು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement