ಧರಣಿಗೆ ಶೆಟ್ಟರ್ ಬೆಂಬಲ
ಹುಬ್ಬಳ್ಳಿ: ನೂತನ ಮರಳು ಸಾಗಾಣಿಕೆ ಕಾಯ್ದೆ ತಕ್ಷಣ ಹಿಂಪಡೆಯಲು ಆಗ್ರಹಿಸಿ ಲಾರಿ ಮಾಲೀಕರು, ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರು ಗಬ್ಬೂರ ಬೈಪಾಸ್ ಬಳಿ ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಬೆಂಬಲ ಸೂಚಿಸಿದ್ದಾರೆ. ತುಂಗಭದ್ರಾ ಮರಳು ಸಾಗಾಣಿಕೆದಾರ ಸಂಘದ ಸದಸ್ಯರು ಆರಂಭಿಸಿರುವ ಧರಣಿ ಮಂಗಳವಾರ 10ನೇ ದಿನಕ್ಕೆ ಕಾಲಿರಿಸಿದ್ದು, ಮರಳು ಸಾಗಾಣಿಕೆದಾರರ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ನೂತನ ಮರಳು ಸಾಗಾಣಿಕೆ ಕಾಯ್ದೆಯಿಂದ ಲಾರಿ ಮಾಲೀಕರ, ಚಾಲಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ತಕ್ಷಣ ಈ ಮೊದಲು ಜಾರಿಯಲ್ಲಿದ್ದ ಮರಳು ಸಾಗಾಣಿಕೆ ಕಾಯ್ದೆ ಮರುಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಪ್ರತಿಭಟನೆಯಿಂದ ಕೂಲಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಉದ್ಯೋಗವಿಲ್ಲದೆ ನರಳುವಂತಾಗಿದೆ. ಸ್ಟಾಕ್ ಯಾರ್ಡ್ ನಿರ್ಮಿಸುವ ಮುನ್ನವೇ ಶಿಕ್ಷಿಸುವ ಕಾನೂನು ಜಾರಿಗೆ ತಂದಿದ್ದು ಎಷ್ಟರಮಟ್ಟಿಗೆ ಸರಿ. ಮೊದಲು ಸ್ಟಾಕ್ ಯಾರ್ಡ್ ನಿರ್ಮಿಸಿ ಎಂದು ಆಗ್ರಹಿಸಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಜೊತೆ ಮಹೇಶ ಟೆಂಗಿನಕಾಯಿ, ನಾಗೇಶ ಕಲ್ಬುರ್ಗಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಇದ್ದರು.