ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆ ಜಾರಿಗೆ ಒತ್ತಾಯ

Lingaraj Badiger
Updated On : 2 Jan 2014, 12:23 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 31
ನೆನೆಗುದಿಗೆ ಬಿದ್ದಿರುವ ಯೋಜನೆಗಳ ಜಾರಿ, ಮಾರ್ಗಗಳ ಬದಲಾವಣೆ ನೂತ ರೈಲು ಮಾರ್ಗಗಳ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತಬುದ್ದೀನ್ ಖಾಜಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ರೇಲ್ವೆ ಸೌಲಭ್ಯ ಕಡಿಮೆ. ಇದಕ್ಕೆ ರಾಜ್ಯದ ಸಂಸದರ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಶೆ. 50ರಷ್ಟು ಅನುದಾನ ಮತ್ತು ಭೂಮಿ ನೀಡುತ್ತಿದೆ. ಆದರೆ, ರೇಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಶೀಘ್ರವೇ ನೂತನ ಯೋಜನೆಗಳ ಅನುಷ್ಠಾನ, ಮಾರ್ಗಗಳ ಬದಲಾವಣೆಗೆ ಅವರು ಒತ್ತಾಯಿಸಿದ್ದಾರೆ.
ಬೇಡಿಕೆಗಳು: ಕುಡಚಿ-ಬಾಗಲಕೋಟೆ 141 ಕಿಮೀ ಯೋಜನೆ ಕಾಮಗಾರಿ ಕೇವಲ 15 ಕಿಮೀ ಆಗಿದೆ.  ಹೊಸಪೇಟೆ-ಹಗರಿಬೊಮ್ಮನಹಳ್ಳಿ-ಕೊಟ್ಟೂರು-ಹರಿಹರ ಕಾಮಗಾರಿ ಮುಗಿದಿದ್ದು, ರೈಲು ಸಂಚಾರ ಆರಂಭಿಸಬೇಕು. ಹುಬ್ಬಳ್ಳಿ-ಅಂಕೋಲಾ, ಗದಗ-ಹಾವೇರಿ, ಬೀದರ್-ಗುಲ್ಬರ್ಗ, ಮುನಿರಾಬಾದ್-ಮೆಹಬೂಬನಗರ, ದಾವಣಗೆರೆ-ತುಮಕೂರು, ಹರಿಹರ-ಶಿವಮೊಗ್ಗ ಮಾರ್ಗಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಸಮಿತಿ ಆಗ್ರಹಿಸಿದೆ.
ಅಲ್ಲದೆ, ಕುಡಚಿ-ಬಾಗಕೋಟೆ ಹೊಸ ರೈಲು ಮಾರ್ಗವನ್ನು ನರೇಗಲ್, ಗಜೇಂದ್ರಗಡ, ಇಲಕಲ್, ಲಿಂಗಸ್ಗೂರು, ಸುರಪುರ, ಶಹಾಪುರ ಮೂಲಕ ರಾಯಚೂರುವರೆಗೆ, ಗದಗ-ವಾಡಿ, ರಾಮದುರ್ಗ ಮಾರ್ಗವಾಗಿ ಬಾಗಲಕೋಟೆ ಬೆಳಗಾವಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ ಮಾರ್ಗವಾಗಿ ಆಲಮಟ್ಟಿ-ಯಾದಗಿರಿ, ಸಿಂದಗಿ ಮಾರ್ಗವಾಗಿ ಬಿಜಾಪುರ ಶಹಾಬಾದ್, ಕಿತ್ತೂರ ಮಾರ್ಗವಾಗಿ ಧಾರವಾಡ ಬೆಳಗಾವಿ, ಅಥಣಿ ಮಾರ್ಗವಾಗಿ ಬಿಜಾಪುರ-ಶೇಡಬಾಳ ರೇಲ್ವೆ ಯೋಜನೆಗಳಿಗೆ ಪ್ರಸಕ್ತ ರೇಲ್ವೆ ಮುಂಗಡ ಪತ್ರದಲ್ಲಿ ಅನುದಾನ ಮೀಸಲು ಇಡಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳಿ-ನವದೆಹಲಿ, ಹುಬ್ಬಳ್ಳಿ-ಮುಂಬೈ, ಸೋಲ್ಲಾಪುರ-ಮಂಗಳೂರು, ಸೊಲ್ಲಾಪುರ ತಿರುಪತಿ, ಸೊಲ್ಲಾಪುರ ಬೆಂಗಳೂರು ಪ್ಯಾಸೆಂಜರ್ ರೈಲುಗಳನ್ನು ಪ್ರತಿದಿನ ಓಡಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಇಷ್ಟೇ ಅಲ್ಲದೆ, ಪ್ರಮುಖ ಮಾರ್ಗಗಳ ವಿದ್ಯುದ್ದೀಕರಣ, ಡಬ್ಲಿಂಗ್, ಆರ್‌ಆರ್‌ಬಿ ಕಚೇರಿಯನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಿತಿ ಒತ್ತಾಯಿಸಿದೆ. ಈ ಎಲ್ಲ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ನೈಋತ್ಯ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಸಂಜೀವ್ ಮಿತ್ತಲ ಅವರಿಗೆ ಸಲ್ಲಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಬಜೆಟ್ ಮಂಡನೆ ಮರುದಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈಲ್ ರೋಖೋ ಮಾಡುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವಿಧ ಹೋರಾಟ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಬಾವಿ, ನಂದಕುಮಾರ ಪಾಟೀಲ, ನವೀನಕುಮಾರ ಮಡಿವಾಳರ ಅಶೋಕ ಹಳ್ಳೂರ, ನಿಸಾರ್ ಅಹ್ಮದ್ ಖಾಜಿ, ಬಸವಣ್ಣಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement