ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪೈಪ್‌ಲೈನ್ ಒಡೆದು ನೀರು ಪೋಲು

Lingaraj Badiger
Updated On : 2 Jan 2014, 12:36 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 1
ಅಧಿಕಾರಿಗಳ ಅಸಡ್ಡೆತನ, ಫೋನ್ ಕರೆ ಮಾಡಿದರೂ ಸ್ವೀಕರಿಸದ ನಿರ್ಲಕ್ಷ್ಯದ ಪರಮಾವಧಿ ಜಲಮಂಡಳಿ ಅಧಿಕಾರಿಗಳಲ್ಲಿ ಮೇರೆ ಮೀರಿದೆ.
ಇಂತಹ ಘಟನೆಗೊಂದು ತಾಜಾ ಉದಾಹರಣೆ, ಬುಧವಾರ, ವಾರ್ಡ್ ನಂ. 27ರ ಉಣಕಲ್‌ನ ಸಾಯಿನಗರ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಜ್ಯೋತಿ ಕಾಲೋನಿ ಬಳಿ ರಿಂಗ್ ಪೈಪ್‌ಲೈನ್ ಒಡೆದ ಪರಿಣಾಮ, ಗುರುಕುಲ, ಕಾವೇರಿ ಕಾಲೋನಿ, ಜ್ಯೋತಿ ಕಾಲೋನಿ, ಶ್ರೀನಗರ, ಸಾಯಿನಗರಕ್ಕೆ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ಒಡೆದು ನೀರು ಇಡೀ ರಾತ್ರಿ ನೀರು ಹರಿದು ಪೋಲಾದರೂ ಅಧಿಕಾರಿಗಳು ರಿಪೇರಿ ಕೆಲಸಕ್ಕೆ ಅಣಿಯಾಗಿದ್ದು, ಬುಧವಾರ ಮಧ್ಯಾಹ್ನ 12ರ ನಂತರ.  
ಐದು ದಿನಗಳಿಗೆ ಒಂದು ಬಾರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಲಮಂಡಳಿ, ತಕ್ಷಣ ಕಾರ್ಯಪ್ರವೃತ್ತರಾಗದ ಪರಿಣಾಮ ಬುಧವಾರದಂದು ನೀರು ಈಗ ಬರುತ್ತದೆ, ಆಗ ಬರುತ್ತದೆ ಎಂದು ಈ ಬಡಾವಣೆಯ ನಿವಾಸಿಗಳು ಕಾಯ್ದು ಕುಳಿತಿದ್ದೇ ಬಂತು ವಿನಃ ನೀರು ಬರಲಿಲ್ಲ.
ಗಾಡಿ ತೊಳಿ ಬ್ಯಾಡ್ರಿ...: ಬುಧವಾರ ಅಮಾವಾಸ್ಯೆಯಾಗಿರುವ ಹಿನ್ನೆಲೆಯಲ್ಲಿ ಪೈಪ್‌ಲೈನ್ ಒಡೆದು ಪೋಲಾಗುತ್ತಿದ್ದ ನೀರಿನಲ್ಲಿ ತಮ್ಮ ವಾಹನಗಳನ್ನಾದರೂ ಸ್ವಚ್ಛಗೊಳಿಸಿ ಪೂಜೆ ಮಾಡೋಣ ಎಂದರೆ ಜಲಮಂಡಳಿ ಅಧಿಕಾರಿಗಳು ಅದಕ್ಕೂ ಆಸ್ಪದ ಕೊಡಲಿಲ್ಲ. ಏಕೆ ಎಂದು ಕೇಳಿದರೆ ಪೇಪರ್‌ನವರು ಬಂದು ಫೋಟೋ ತೆಗಿತಾರೆ. ಮತ್ತೆ ಇಲ್ಲದ ಉಸಾಬರಿ ಎಂದು ಜಾರಿಕೊಳ್ಳುವ ಕೆಲಸ ಮಾಡಿದರು. ಹೇಗೋ ನೀರು ಪೋಲಾಗುತ್ತಿದೆ. ನೀವಂತೂ ನೀರು ಕೊಡೋದಿಲ್ಲ. ಇದರಲ್ಲಾದರೂ ವಾಹನಗಳನ್ನ ತೊಳೆದುಕೊಳ್ಳುವುದಕ್ಕೆ ಅವಕಾಶ ನೀಡಿ ಜ್ಯೋತಿ ಕಾಲೋನಿ ನಿವಾಸಿಗಳು ಕೇಳಿಕೊಂಡರೆ ಬೇಡವೇ ಬೇಡ ಸುಮ್ಮನೆ ಹೋಗಿ ಎಂದು ಜಲಮಂಡಳಿ ಅಧಿಕಾರಿಗಳು ದಬಾಯಿಸುವ ಕೆಲಸ ಮಾಡಿದರು.
ಈ ಕುರಿತು 'ಕನ್ನಡಪ್ರಭ' ಜತೆ ಮಾತನಾಡಿದ ಜಲಮಂಡಳಿ ಸಹಾಯಕ ಅಭಿಯಂತರ ಗಿಡ್ಡಲಿಂಗನ್ನವರ, ರಿಪೇರಿ ಬರುವುದು, ಪೈಪ್ ಒಡೆಯುವುದು ಸಹಜ, ಇದನ್ನೇ ಏಕೆ ದೊಡ್ಡ ಸಮಸ್ಯೆ ಮಾಡುತ್ತೀರಿ? ಎಂದು ಪ್ರಶ್ನಿಸಿ ಬೇಜವಾಬ್ದಾರಿ ತೋರಿದರು.
ಕೇವಲ ಆರು ವರ್ಷಗಳ ಹಿಂದೆ ಹುಬ್ಬಳ್ಳಿ ನಗರದ ಸುತ್ತ ರಿಂಗ್ ಪೈಪ್‌ಲೈನ್ ಅಳವಡಿಸಲಾಗಿದೆ. ಮುಖ್ಯ ಸರಬರಾಜು ಮಾರ್ಗವಾಗಿರುವ ಕಾರಣ ಒಂದು ವೇಳೆ ಈ ಪೈಪ್‌ಲೈನ್‌ನಲ್ಲಿ ಸಮಸ್ಯೆಯಾದರೆ ಸುತ್ತಲಿನ ಬಡಾವಣೆಗಳಿಗೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ಆರು ವರ್ಷಗಳ ಹಿಂದೆ ಅಳವಡಿಸಿರುವ ಪೈಪ್‌ಲೈನ್ ಒಡೆಯುತ್ತಿರುವುದನ್ನು ನೋಡಿದರೆ ಕಾಮಗಾರಿ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಸಂಶಯ ವ್ಯಕ್ತವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement