ಮಹಾಪ್ರಬಂಧಕರಾಗಿ ಸಕ್ಸೆನಾ ಅಧಿಕಾರ ಸ್ವೀಕಾರ
ಹುಬ್ಬಳ್ಳಿ: ನೈಋತ್ಯ ರೇಲ್ವೆ ವಲಯ ಮಹಾಪ್ರಬಂಧಕರಾಗಿ ಪ್ರದೀಪಕುಮಾರ ಸಕ್ಸೆನಾ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಹುಬ್ಬಳ್ಳಿಯ ನೈಋತ್ಯ ರೇಲ್ವೆ ವಲಯ ಮಹಾಪ್ರಬಂಧಕರಾಗಿ ಅಧಿಕಾರ ಸ್ವೀಕರಿಸಿರುವ ಪಿ.ಕೆ. ಸಕ್ಸೆನಾ ಅವರು ಮುಂಬೈನ ಸೆಂಟ್ರಲ್ ರೇಲ್ವೆ ಮುಖ್ಯ ಪ್ರಧಾನ ಎಂಜಿನಿಯರ್ ಎಂದು ಕಾರ್ಯನಿರ್ವಹಿಸುತ್ತಿದ್ದರು. 1977ರ ಭಾರತೀಯ ರೇಲ್ವೆ ಸರ್ವೀಸ್ ಕೆಡರ್‌ನ ಅಧಿಕಾರಿಯಾಗಿರುವ ಸಕ್ಸೆನಾ ಸೆಂಟ್ರಲ್ ರೇಲ್ವೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಆರಂಭಿಸಿದ್ದರು. ಬಳಿಕ ಮುಂಬೈ ಮೆಟ್ರೋಪಾಲಿಟಿನ್ ಟ್ರಾನ್ಸಪೋರ್ಟ್ ಪ್ರಾಜೆಕ್ಟ್‌ನಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದರು.
ಇಂದು ನಾಟಕೋತ್ಸವ
ಧಾರವಾಡ: ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಸ್ಮರಣಾರ್ಥ ಜ. 2ರಿಂದ 5ರ ವರೆಗೆ ರಂಗಾಯಣ ಆವರಣದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಧಾರವಾಡದ ರಂಗಪರಿಸರ ಮತ್ತು ರಂಗಪಯಣ ಸಂಸ್ಥೆಗಳ ಸಹಯೋಗದಲ್ಲಿ ಜ.2ರಿಂದ 5ರವರೆಗೆ ಪ್ರತಿ ದಿನ ಸಂಜೆ 7ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. 2ರಂದು ಬಿರುಗಾಳಿ, 3ರಂದು ಮಹಾರಾತ್ರಿ, 4ರಂದು ಒಳಸುಳಿಗಳು, 5ರಂದು ಪದರುಗಳು ನಾಟಕ ಪ್ರದರ್ಶನವಾಗಲಿವೆ.
ನಾಳೆಯಿಂದ ಕ್ರೀಡಾಕೂಟ
ಹುಬ್ಬಳ್ಳಿ: ಇಂಧನ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕವಿಪ್ರನಿನಿ ಹಾಗೂ ಎಲ್ಲ ಐದು ವಿದ್ಯುತ್ ಸರಬರಾಜು ಕಂಪನಿಗಳ ಅಂತರ್ ಕಂಪನಿ ಮಹಿಳೆಯರ ಮತ್ತು ಪುರುಷರ ಶೆಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಕೇರಂ, ಬಾಲ್ ಬ್ಯಾಡ್ಮಿಂಟನ್, ಟೆನ್ನಿಕ್ವ್ಯಾಟ್, ಥ್ರೋಬಾಲ್, ಯೋಗ ಪಂದ್ಯಾವಳಿ ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜ. 3 ಮತ್ತು 4ರಂದು ನಡೆಯಲಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಕ್ರೀಡಾಕೂಟಕ್ಕೆ ಚಾಲನೆ ನೀಡುವರು.