ಹಲ್ಲೆ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ
ಹುಬ್ಬಳ್ಳಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿಯ ಹೋಟೆಲ್ನಲ್ಲಿ ನಡೆಸಿದ್ದ ದಾಳಿಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆ ನಡೆಸಲು ಪ್ರೋತ್ಸಾಹಿಸಿದ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ ರೋಡ್ಕರ್ ಕ್ರಮವನ್ನು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಇನ್ಸ್ಪೆಕ್ಟರ್ ಗಿರೀಶ ರೋಡ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿರುವ ಸಂಘದ ಅಧ್ಯಕ್ಷ ಮಂಜುನಾಥ ಭಟ್, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಮಹಾನಗರ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಘದ ವತಿಯಿಂದ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಲ್ಲೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ
ಧಾರವಾಡ: ಹೊಸ ವರ್ಷದ ಸಂಭ್ರಮಾಚರಣೆಯ ದೃಶ್ಯ ಚಿತ್ರೀಕರಣಕ್ಕೆ ಹೋಗಿದ್ದ ಹುಬ್ಬಳ್ಳಿಯ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಮೇಲೆ ನಡೆದ ಹಲ್ಲೆ ಖಂಡಿಸಿ ಬುಧವಾರ ಧಾರವಾಡದ ಪತ್ರಕರ್ತರು ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ಹನ್ಸ್ ಹೋಟೆಲ್ನಲ್ಲಿ ಮಂಗಳವಾರ ರಾತ್ರಿ ಸಂಭ್ರಮಾಚರಣೆಯ ನೆಪದಲ್ಲಿ ನಂಗಾನಾಚ್ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಹೋಟೆಲ್ಗೆ ಮುತ್ತಿಗೆ ಹಾಕಿದ ಸುದ್ದಿ ತಿಳಿಯುತ್ತಿದ್ದಂತೆ ವರದಿ ಮಾಡಲು ಸ್ಥಳಕ್ಕೆ ಹೋದ ಸುದ್ದಿ ವಾಹಿನಿ ಕ್ಯಾಮೆರಾಮನ್ ನಾರಾಯಣ ಮೇಲೆ ಹೋಟೆಲ್ ಮಾಲೀಕರು ಸೇರಿದಂತೆ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಇದರಿಂದ ಕ್ಯಾಮೆರಾ ಜಖಂಗೊಂಡಿದೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆಂದು ಪತ್ರಕರ್ತರು ಒಕ್ಕೂರಲಿನಿಂದ ಆಗ್ರಹಿಸಿದರು. ಈ ಸಂದರ್ಭದಲ್ಲಿ ವೆಂಕನಗೌಡ ಪಾಟೀಲ, ರಾಜೇಂದ್ರ ಪಾಟೀಲ, ಸುರೇಶ ಜಾಡರ, ಮಂಜುನಾಥ ಅಂಗಡಿ, ಮುಸಫಾ ಕುನ್ನಿಭಾವಿ. ಜಾವೇದ ಅಧೋನಿ, ರವೀಶ ಪವಾರ, ಸಂತೋಷ, ರವಿ ಕುಲಕರ್ಣಿ, ಸುಬಾನಿ ಹುಕ್ಕೇರಿ, ಆರ್.ಕೆ. ಕುಲಕರ್ಣಿ, ರವಿ ಉಳ್ಳಾಗಡ್ಡಿ, ಪ್ರಕಾಶ ಹೆಬ್ಬಳ್ಳಿ, ಪ್ರಶಾಂತ ದಿನ್ನಿ, ಶಕೀಲ ಮುಲ್ಲಾ ಇದ್ದರು.