ಕೃಷಿಕ, ಕೃಷಿ ಕೂಲಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ
ಹುಬ್ಬಳ್ಳಿ: ಕೃಷಿಕ ಹಾಗೂ ಕೃಷಿ ಕೂಲಿ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕೃಷಿಕ ಮತ್ತು ಕೃಷಿ ಕೂಲಿ ಕಾರ್ಮಿಕರ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಕೂಲಿ ಕಾರ್ಮಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕೃಷಿಕ ವಿಧವಾ ಮಹಿಳೆಯರಿಗೆ ರು. 3 ಸಾವಿರ ಮಾಸಾಶನವನ್ನು ಸರ್ಕಾರ ನೀಡಬೇಕು. 55 ವರ್ಷ ಮೀರಿದ ಬಡ ಕೃಷಿಕರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಬಡ ಕೃಷಿಕರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ 3 ಸಾವಿರ ಮಾಸಾಶನ ನೀಡಬೇಕು. ಬಡ ಕೃಷಿಕರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಪ್ರತಿ ವರ್ಷ ದೀಪಾವಳಿಗೆ ರು. 20 ಸಾವಿರ ಬೋನಸ್‌ನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕು. ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ರು. 5 ಲಕ್ಷ ಪುರಸ್ಕಾರ ಮತ್ತು ಅಜೀವಮಾನ ರು. 3 ಸಾವಿರ ಮಾಸಾಶನವನ್ನು ಸರ್ಕಾರ ಶೀಘ್ರ ಘೋಷಿಸಬೇಕೆಂದರು.
ಕೃಷಿಯಲ್ಲಿ ಸಾಧನೆ ಮಾಡಿದ ಯುವಕರಿಗೆ ಯುಪಿಎಸ್‌ಸಿ/ ಕೆಪಿಎಸ್‌ಸಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ವಯೋವುತಿ ಸಡಿಲಿಕೆ, ಮೀಸಲಾತಿ ಜೊತೆಗೆ ಇನ್ನಿತರ ಸವಲತ್ತುಗಳನ್ನು ಸರ್ಕಾರ ಕಲ್ಪಿಸಬೇಕು. ಪ್ರತಿ ಶನಿವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ರಂಗದ ತರಬೇತಿ ಅಥವಾ ಕಾರ್ಯಾಗಾರವನ್ನು ಕಡ್ಡಾಯಗೊಳಿಸಬೇಕು. ಶನಿವಾರವನ್ನು ಕೃಷಿ ವಿಜ್ಞಾನ ದಿನವನ್ನಾಗಿ ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಕೂಲಿ ಕಾರ್ಮಿಕರು ಒತ್ತಾಯಿಸಿದರು. ನಂತರ ತಹಸೀಲ್ದಾರ ಕಚೇರಿ ಅಧಿಕಾರಿ ಮೂಲಕ ಪ್ರಧಾನಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಮಿತಿ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮೀ ಸುಳ್ಳೊಳ್ಳಿ, ಸಾವಿತ್ರಿ ಹುಲಮನಿ, ಸುನಿತಾ ಡಾಳಿ, ಫರೀದಾ ಶೇಖ ಮತ್ತಿತರರಿದ್ದರು.