ಇಂದು ರಂಗ ಸಮಾಜ ಸಭೆ
ಧಾರವಾಡ: ರಾಜ್ಯದ ರಂಗಾಯಣಗಳ ಮೇಲುಸ್ತುವಾರಿ ವಹಿಸಿರುವ ರಂಗ ಸಮಾಜದ ಸದಸ್ಯರ ಸಭೆ ಜ. 6ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸಭೆಯಲ್ಲಿ ಧಾರವಾಡ ಹಾಗೂ ಶಿವಮೊಗ್ಗ ರಂಗಾಯಣಗಳ ನಿರ್ದೇಶಕರ ಸ್ಥಾನಕ್ಕೆ ಹಲವರ ಹೆಸರುಗಳನ್ನು ಪ್ರಸಾಪಿಸುವ ಸಂಭವವಿದೆ. ಧಾರವಾಡ ಹಾಗೂ ಶಿವಮೊಗ್ಗ ರಂಗಾಯಣಗಳ ನಿರ್ದೇಶಕರ ಸ್ಥಾನ ತುಂಬಲು ರಂಗ ಸಮಾಜದ ಸದಸ್ಯರ 2ನೇ ಸಭೆಯಲ್ಲಿ ಎರಡೂ ರಂಗಾಯಣಗಳಿಗೆ ತಲಾ ಮೂರು ಜನರ ಹೆಸರನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ. ಶಿವಮೊಗ್ಗ ರಂಗಾಯಣಕ್ಕೆ ಮೂಲತಃ ಹುಬ್ಬಳ್ಳಿಯ ಇದೀಗ ಬೆಂಗಳೂರಿನಲ್ಲಿರುವ ಪ್ರಮೋದ ಶಿಗ್ಗಾಂವ, ಶಿವಮೊಗ್ಗದ ನೀನಾಸಂನ ತರಬೇತಿ ಪಡೆದ ಇಕ್ಬಾಲ್ ಅಹ್ಮದ್ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಎಸ್. ಮಾಲತಿ ಅವರ ಹೆಸರುಗಳನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಅದೇ ರೀತಿ, ಧಾರವಾಡದ ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ಮಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಗೋಪಾಲಕೃಷ್ಣ ನಾಯರಿ, ರಂಗಭೂಮಿಯ ಕುರಿತು ಸಂಶೋಧನೆ ಮಾಡಿರುವ ಧಾರವಾಡದ ಡಾ. ಪ್ರಕಾಶ ಗರುಡ ಹಾಗೂ ರಂಗಕರ್ಮಿ ವಿಠಲ ಕೊಪ್ಪದ ಅವರ ಹೆಸರುಗಳನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ರಂಗ ಸಮಾಜದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಇಂಗ್ಲಿಷ್ ಕಾರ್ಯಾಗಾರ ಇಂದು
ಕಲಘಟಗಿ: ತಾಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸುಧಾರಣೆ ಕುರಿತು ಉಚಿತ ಇಂಗ್ಲಿಷ್ ಕಾರ್ಯಾಗಾರವನ್ನು ಜ. 6 ಮತ್ತು 7 ರಂದು ಪಟ್ಟಣದ ಜನತಾ ಇಂಗ್ಲಿಷ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಇಂಗ್ಲಿಷ್ ಪಪೂ ಕಾಲೇಜು ಹಾಗೂ ಹುಬ್ಬಳ್ಳಿಯ ವರದ ಶ್ರೀ ಫೌಂಡೇಶನ್ನ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಜಿಪಂ ಅಧ್ಯಕ್ಷ ಶಂಕ್ರಣ್ಣ ಅಗಡಿ ಕಾರ್ಯಾಗಾರ ಉದ್ಘಾಟಿಸುವರು. ರಾಜ್ಯ ಸಂಪನ್ಮೂಲ ವ್ಯಕ್ತಿ ಮಾತೋಶ್ರೀ ಶಾಂತಿ ದೇಸಾಯಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಂತೆ ವರದಶ್ರೀ ಫೌಂಡೇಶನ್ನ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡೇರ, ಬಿಇಒ ವಿ. ಜಿ. ಪೋಳ ಕೋರಿದ್ದಾರೆ.
ಇಂದು ಉದ್ಯೋಗ ಮೇಳ
ಹುಬ್ಬಳ್ಳಿ: ಇಲ್ಲಿನ ವಿದ್ಯಾಭಾರತಿ ಫೌಂಡೇಷನ್ನ ಐಬಿಎಂಆರ್ ಮಹಾವಿದ್ಯಾಲಯದಲ್ಲಿ ಜ. 6 ಮತ್ತು 7ರಂದು ಬೆಳಗ್ಗೆ 10ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಿದ್ಯಾನಗರ ಅಕ್ಷಯ ಕಾಲೋನಿಯಲ್ಲಿರುವ ಐಬಿಎಂಆರ್ ಮಹಾವಿದ್ಯಾಲಯದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ ಎಂಟಿಎಸ್, ವೋಡ್ಫೋನ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಬೇಸ್ ಸೇರಿದಂತೆ 15ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅಥವಾ ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ 8792624244 ಸಂಪರ್ಕಿಸಿ.