ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಾಲಕಿ ಮೇಲೆ ಅತ್ಯಾಚಾರವೇ ನಡೆದಿಲ್ಲ

Lingaraj Badiger
Updated On : 6 Jan 2014, 12:39 pm

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 5
ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂಬ ದೂರು, ಸತ್ಯಕ್ಕೆ ದೂರ ಎಂಬುದು ಇದೀಗ ಸ್ಪಷ್ಟವಾಗಿದೆ.
ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ, ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ಪ್ರಾಥಮಿಕ ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ ಎಂದರು.
ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ಸಲ್ಲಿಸಿದ ಸಿದ್ರಾಮಪ್ಪ ಮತ್ತು ಆರೋಪ ಎದುರಿಸಿದ ಪರುಶುರಾಮ ಮತ್ತಿತರರು ಒಂದೇ ಕುಟುಂಬದ ಸದಸ್ಯರಾಗಿದ್ದು, ಆಸ್ತಿ ವಿಷಯವಾಗಿ ಇಷ್ಟೆಲ್ಲಾ ಗೊಂದಲ ನಡೆದಿದೆ ಎನ್ನುವುದು ತನಿಖೆ ವೇಳೆ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದರು.
ತನಿಖೆಯಿಂದ ತಿಳಿದಿದ್ದು...: ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದ ಬಾಲಕಿ ತನ್ನ ಅಜ್ಜಿ ಮನೆ ಹಿರೇನರ್ತಿಗೆ ಬಂದಿದ್ದಳು. ಡಿ. 31ರ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಬಾಲಕಿಯನ್ನು ವಾಹನವೊಂದರಲ್ಲಿ ಅಪಹರಿಸಿ ಜ. 1ರ ಬೆಳಗ್ಗೆ 5ರ ಸುಮಾರಿಗೆ ಹಾವೇರಿ ಜಿಲ್ಲೆಯ ನೆಲೊಗಲ್‌ನ ಹೊಲವೊಂದರಲ್ಲಿ ಪರಶುರಾಮ ಹಾಗೂ ಇನ್ನಿಬ್ಬರು ಅತ್ಯಾಚಾರ ಎಸಗಿದ್ದಾರೆಂದು ಬಾಲಕಿ ತಂದೆ ಸಿದ್ರಾಮಪ್ಪ ಯಲಿವಾಳ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಬೇರೆ ಬೇರೆ ಅಂಶಗಳು ಸ್ಪಷ್ಟವಾದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಬನಹಟ್ಟಿ, ಕುಂದಗೋಳ ಹಾಗೂ ಹುಬ್ಬಳ್ಳಿ ಪೊಲೀಸ್ ಠಾಣೆ ಇನಸ್ಪೆಕ್ಟರ್ ಒಳಗೊಂಡ ತಂಡ ರಚಿಸಿ ತನಿಖೆ ನಡೆಸಿದ ನಂತರ ಸತ್ಯಾಂಶಗಳು ಬೆಳಕಿಗೆ ಬಂದಿವೆ.
ಈ ಆಟಕ್ಕೆ ಕಾರಣಗಳಿವು...: ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡಿದವರೇ ತನಿಖೆ ವೇಳೆ ತಪ್ಪಿತಸ್ಥರು ಎಂದು ದೃಢಪಟ್ಟಿದ್ದು, ಆರೋಪ ಎದುರಿಸುತ್ತಿದ್ದ ಪರಶುರಾಮ, ಸಿದ್ರಾಮಪ್ಪನ ತಂಗಿಯ ಮಗನಾಗಿದ್ದಾನೆ. ಈ ಹಿಂದೆ ಮಗಳನ್ನು ಮದುವೆಯಾಗಲು ನಿರಾಕರಿಸಿದ್ದ ಅಲ್ಲದೇ, ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ  ಎರಡು ಕುಟುಂಬದ ಮಧ್ಯೆ ಜಗಳವಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚಾಗಿ ಸಿದ್ರಾಮಪ್ಪ ಹಾಗೂ ಆತನ ಕುಟುಂಬದವರು ಇಷ್ಟು ವರ್ಷ ಪರಶುರಾಮ ಅವರ ಮನೆಯಲ್ಲಿಯೇ ಇದ್ದು ಜಗಳ ಬಂದ ಮೇಲೆ ಅರಳಿಕಟ್ಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಗಳನ್ನು ಮದುವೆಯಾಗಲಿಲ್ಲ, ಇತ್ತ ಆಸ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ಸಿದ್ರಾಮಪ್ಪ ಹಾಗೂ ಆತನ ಸಹೋದರರಾದ ಶಿವಾನಂದ ಮತ್ತು ವಿರೂಪಾಕ್ಷ ಉಪಾಯ ಮಾಡಿ ಡಿ. 31ರ ರಾತ್ರಿ ರಮೇಶ ಎಂಬುವನಿಂದ ಜೋಗ ಜಲಾಪಾತಕ್ಕೆ ಬಾಡಿಗೆ ಇದೆ ಬಾ ಎಂದು ಪರಶುರಾಮನನ್ನು ಕರೆಯಿಸಿ ಆತನ ಕೈಗಳನ್ನು ಕಟ್ಟಿ  ಹಾಕಿ ಬಾಲಕಿಯೊಂದಿಗೆ ಹಾವೇರಿಗೆ ಹೋಗಿದ್ದಾರೆ.
ಆವರು ಹೋದ ವಾಹನ, ಅದಕ್ಕೆ ಡೀಸೆಲ್ ಹಾಕಿಸಿದ ಸಂದರ್ಭ, ವಾಹನದಲ್ಲಿ ಯಾರ್ಯಾರು ಇದ್ದರು ಎನ್ನುವುದನ್ನು ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಲ್ಲದೇ, ಹಾವೇರಿ ಪೊಲೀಸರು ಬ್ಯಾಡಗಿಯ ಪ್ರಮುಖ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಬಾಲಕಿ ತಂದೆ ಸಿದ್ರಾಮಪ್ಪ, ಶಿವಾನಂದ ಸ್ವಾಮಿ ಹಾಗೂ ಪರಶುರಾಮ ಇರುವ ಚಿತ್ರ ಲಭಿಸಿದೆ ಎಂದು ಲೋಕೇಶಕುಮಾರ ಮಾಹಿತಿ ನೀಡಿದರು.
ಈ ಎಲ್ಲ ಸಂಗತಿಗಳು ತನಿಖೆ ಸಂದರ್ಭದಲ್ಲಿ ಗೊತ್ತಾಗಿದ್ದು, ಇದಕ್ಕೆ ಪೂರಕ ಎನ್ನುವಂತೆ ಕಿಮ್ಸ್ ನೀಡಿರುವ ಪ್ರಾಥಮಿಕ ವೈದ್ಯಕೀಯ ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ಮಧ್ಯೆ ಆರೋಪ ಎದುರಿಸುತ್ತಿದ್ದ ಪರಶುರಾಮನ ಚಿಕ್ಕಮ್ಮ ಚೆನ್ನಕ್ಕ ಎಂಬುವರು ಸಿದ್ರಾಮಪ್ಪ ಹಾಗೂ ಇನ್ನಿತರೆ ಆರೋಪಿಗಳ ಮೇಲೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಶುರಾಮನನ್ನು ಅಪಹರಣ ಮಾಡಿದ್ದ ಸಿದ್ರಾಮಪ್ಪ ಹಾಗೂ ಶಿವಾನಂದಸ್ವಾಮಿ ಹಾಗೂ ಸಹಾಯ ಮಾಡಿದ ರಮೇಶನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ವಿರೂಪಾಕ್ಷನನ್ನು ಶೀಘ್ರ ಬಂಧಿಸಲಾಗುವುದು ಎಂದು ಲೋಕೇಶ ಕುಮಾರ ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಆರ್.ಎಸ್. ಬನಹಟ್ಟಿ, ಕುಂದಗೋಳ ಸಿಪಿಐ ಎಂ.ಎಸ್. ಪಾಟೀಲ, ಹುಬ್ಬಳ್ಳಿ ಪೊಲೀಸ್ ಠಾಣೆ ಸಿಪಿಐ ಮುತ್ತಣ್ಣ ಸರವಗೋಳ ಇದ್ದರು.

ಪೊಲೀಸರ ಮೇಲೆ ಸಂಶಯ ಬೇಡ..
ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತಕ್ಷಣ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗುತ್ತದೆ. ಆದರೂ ಕೆಲವರು ಪೊಲೀಸರ ಮೇಲೆ ಸಂಶಯ ವ್ಯಕ್ತಪಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು. ಪ್ರಕರಣದಲ್ಲಿ ಬೇರೆ ಅಂಶಗಳು ಇದ್ದ ಕಾರಣ ಆರೋಪಿಗಳನ್ನು ಬಂಧಿಸಲಿಲ್ಲ. ಇದೀಗ ಸುಳ್ಳು ಆರೋಪ ಎನ್ನುವುದು ಖಚಿತವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿರುವುದು ಗೊತ್ತಿದ್ದ ವಿಷಯ. ಇದಲ್ಲದೇ, ಈ ಪ್ರಕರಣದಲ್ಲಿ ಶಾಸಕ ಸಿ.ಎಸ್. ಶಿವಳ್ಳಿ ಅವರ  ಪಾತ್ರ ಇಲ್ಲ.
- ಲೋಕೇಶ ಕುಮಾರ (ಧಾರವಾಡ ಜಿಲ್ಲಾ ಎಸ್ಪಿ)
ಉಲ್ಟಾ ಹೊಡೆದ ಪ್ರಕರಣ..
ಹೊಸ ವರ್ಷದ ಮೊದಲನೇ ದಿನವೇ ಕುಂದಗೋಳನಲ್ಲಿ ಬಾಲಕಿ ಅಪಹರಣ ಹಾಗೂ ಅತ್ಯಾಚಾರದ ಆರೋಪ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಘಟನೆ ಖಂಡಿಸಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಸೇರಿದಂತೆ ಧಾರವಾಡದ ವಿವಿಧ ಸಂಘಟನೆಗಳು ಆರೋಪಿಗಳ ಬಂಧನಕ್ಕೆ ತೀವ್ರ ಹೋರಾಟ ನಡೆಸಿದ್ದವು. ಆದರೆ, ಇದೀಗ ತನಿಖೆಯಿಂದ ಪ್ರಕರಣ ಉಲ್ಟಾ ಹೊಡೆದಿದ್ದು, ಬಾಲಕಿ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಪ್ರಾಥಮಿಕ ವೈದ್ಯಕೀಯ ವರದಿಯಿಂದ ಸಾಬೀತಾಗಿದೆ. ತಮ್ಮ ತಮ್ಮ ವೈಯಕ್ತಿಕ ವಿಚಾರಗಳಿಗೋಸ್ಕರ ಸುಳ್ಳು ದೂರು ನೀಡಿ ಸಮಾಜದ ಹಿತ ಕೆಡಿಸುವ ಇಂತಹ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement