ಸಂಚು ವಿಫಲ, ತೇಜೋವಧೆಗೆಯತ್ನಿಸಿದವರಿಗೆ ಮುಖಭಂಗ
ಕುಂದಗೋಳ: ಬುಡರಸಿಂಗಿ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ವೈದ್ಯಕೀಯ ವರದಿಯಿಂದ ಧೃಡಪಟ್ಟಿದೆ. ಕೆಲ ಹಿತಾಸಕ್ತಿಗಳು ಈ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಮಾಡಿದ ಸಂಚು ವಿಫಲಗೊಂಡಿದೆ ಎಂದು ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು. ರಾಜಕೀಯ ಬೆಳವಣಿಗೆ ಸಹಿಸದ ಕೆಲ ಹಿತಾಸಕ್ತಿಗಳು ಇಂತಹ ಕೀಳು ಮಟ್ಟದ ಆರೋಪ ತಮ್ಮ ಮೇಲೆ ಹೊರಿಸುವ ಮೂಲಕ ತೇಜೋವಧೆಗೆ ಯತ್ನಿಸಿದ್ದರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು. ಜ. 31 ರಂದು ಗ್ರಾಮದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಶುದ್ಧ ಸುಳ್ಳು ಎಂಬುದು ವೈದ್ಯಕೀಯ ವರದಿಯಿಂದ ಸ್ಪಷ್ಟವಾಗಿದೆ. ಈ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎಂದೂ ಅವರು ಪುನರುಚ್ಛರಿಸಿದರು. ಎರಡು ಕುಟುಂಬಗಳ ಮಧ್ಯದಲ್ಲಿದ್ದ ಆಸ್ತಿ ವಿವಾದ ಪ್ರಕರಣ ಇದಾಗಿದೆ. ಕೆಲ ರಾಜಕೀಯ ಮುಖಂಡರು ತಮ್ಮ ಬೆಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಘಟನೆಯನ್ನು ಅತ್ಯಾಚಾರ ಪ್ರಕರಣವನ್ನಾಗಿಸಿಕೊಂಡು ತಮ್ಮ ಹೆಸರಿಗೆ ಮಸಿ ಬಳಿಯಲು ಯತ್ನಿಸಿ ಇದೀಗ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ ಎಂದೂ ಶಿವಳ್ಳಿ ಹೇಳಿದರು. ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಇಂತಹ ಹೀನ ಕೃತ್ಯಗಳಿಗೆ ಬೆಂಬಲಿಸಿಲ್ಲ. ತಾವು ರಾಜಕೀಯ ಜೀವನದಲ್ಲಿರುವವರೆಗೂ ರೈತರ, ದೀನದಲಿತರ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಈ ಪ್ರಕರಣದ ಆರೋಪಿಗಳು ಯಾರೇ ಇರಲಿ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಇಂದು ಪ್ರತಿಭಟನೆ: ತಮ್ಮ ಹೆಸರನ್ನು ಅನವಶ್ಯಕವಾಗಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿ ಅಪಪ್ರಚಾರ ಮಾಡಿದ್ದನ್ನು ಖಂಡಿಸಿ ಜ. 6 ರಂದು ಬೆಳಗ್ಗೆ ಗಾಳಿಮರೆಮ್ಮ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಲಾಗುವುದು. ಪಪಂ ಸದಸ್ಯ ಅಜೀಜ ಕ್ಯಾಲಕೊಂಡ, ಬಸುರಾಜ ಶಿರಸಂಗಿ, ಹೈದರಸಾಬ ಹಸೂಬಾಯಿ, ಮಂಜುನಾಥ ಗದುಗಿನಮಠ, ಸಿದ್ದಪ್ಪ ಹುಣಸಣ್ಣವರ, ಚಿದಾನಂದ ಬಡಿಗೇರ ಪತ್ರಿಕಾಗೋಷ್ಠಿಯಲ್ಲಿದ್ದರು.