ಹುಬ್ಬಳ್ಳಿ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ
- ಆನಂದ ಅಂಗಡಿ
ಹುಬ್ಬಳ್ಳಿ: ರನ್ ವೇ ವಿಸ್ತರಣೆ ಸರ್ವೇ ಪ್ರಾರಂಭಗೊಳ್ಳುವ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ ವಿಮಾನ ಹಾರಾಟದ ಕನಸು ನನಸಾಗುವ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ. 5,400 ಅಡಿ ಉದ್ದ ಇರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್ ವೇ 8 ಸಾವಿರ ಅಡಿ ವಿಸ್ತರಣೆಗೆ ಸರ್ವೇ ಕಾರ್ಯ ಪ್ರಾರಂಭಗೊಂಡಿದ್ದು, ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ. ಈಗಿನ ರನ್ ವೇ ಸಣ್ಣ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿದ್ದು, ರನ್ ವೇ 8 ಸಾವಿರ ಅಡಿವರೆಗೆ ವಿಸ್ತೀರ್ಣಗೊಂಡಲ್ಲಿ ಬೋಯಿಂಗ್ ವಿಮಾನಗಳೂ ಬಂದಿಳಿಯಬಹುದು.
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕೇರಿಸಲು ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಇದರೊಂದಿಗೆ ರನ್ ವೇ ವಿಸ್ತರಣೆ ಕಾರ್ಯವೂ ಪ್ರಾರಂಭಗೊಳ್ಳುವ ಮೂಲಕ ಈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟಕ್ಕೇರಿಸಲು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಂತಾಗಿದೆ. ರನ್ ವೇ ವಿಸ್ತರಣೆಗಾಗಿ ಪ್ರಥಮ ಹಂತದ ರು. 63 ಕೋಟಿ ಈಗಾಗಲೇ ಬಿಡುಗಡೆಗೊಂಡಿದ್ದು, ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ರು. 7.50 ಕೋಟಿ ವೆಚ್ಚದ 9 ಕಿ.ಮೀ. ಉದ್ದದ ಆವರಣ ಗೋಡೆ ನಿರ್ಮಾಣಕ್ಕೆ ಕಾರ್ಯವೂ ಪ್ರತಿಶತ 80ರಷ್ಟು ಪೂರ್ಣಗೊಂಡಿದೆ.
ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿರುವ ಪ್ರದೇಶದಲ್ಲಿ ಪಕ್ಕದ ಬೈಪಾಸ್ನಿಂದ ವಿಮಾನ ನಿಲ್ದಾಣಕ್ಕೆ ಬಂದುಹೋಗಲು ಗುಣಮಟ್ಟದ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಈ ರಸ್ತೆಗೆ ವಿಮಾನ ನಿಲ್ದಾಣದ ರಸ್ತೆ ಜೋಡಿಸುವ ಕಾರ್ಯ ಬಾಕಿ ಉಳಿದಿದೆ. ಇನ್ನೂ ಒಂದು ತಿಂಗಳಲ್ಲಿ ಈ ರಸ್ತೆಗೆ ವಿಮಾನ ನಿಲ್ದಾಣದ ಮುಖ್ಯದ್ವಾರ ಸೇರಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ಬೆಂಗಳೂರು ಮತ್ತು ಮುಂಬೈನಿಂದ ಎರಡು ಸ್ಪೈಸ್ ಜೆಟ್ ವಿಮಾನಗಳು ಹುಬ್ಬಳ್ಳಿಗೆ ಬಂದು ಹೋಗುತ್ತಿವೆ. ಈ ವಿಮಾನಗಳಲ್ಲಿನ ಆಸನಗಳ ಸಾಮರ್ಥ್ಯ ಕೇವಲ 78 ಇರುವುದರಿಂದ ಹೆಚ್ಚು ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಲು ಅಸಾಧ್ಯ. ಜೊತೆಗೆ ಕಡಿಮೆ ಆಸನಗಳು ಇರುವುದರಿಂದ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮುಂಬೈಗೆ ಹೋಗಿಬರುವ ದರವೂ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ, ಕಡಿಮೆ ವಿಸ್ತೀರ್ಣದ ರನ್ವೇ. ಸಣ್ಣ ಪ್ರಮಾಣದ ರನ್ ಇರುವ ಕಾರಣ ಇಲ್ಲಿ ಸಣ್ಣ ವಿಮಾನಗಳಷ್ಟೇ ಇಳಿಯಲು ಸಾಧ್ಯ.
ರನ್ ವೇ ವಿಸ್ತರಣೆಗೊಂಡಲ್ಲಿ ಇನ್ನೂ ಹೆಚ್ಚಿನ ಆಸನಗಳ ಸಾಮರ್ಥ್ಯ ಇರುವ ದೊಡ್ಡ ವಿಮಾನಗಳು ಬಂದಿಳಿಯಲು ಅನುಕೂಲವಾಗುತ್ತದೆ. ವಿಮಾನಗಳಲ್ಲಿ ಹೆಚ್ಚು ಆಸನಗಳಿದ್ದಲ್ಲಿ ಪ್ರಯಾಣಿಕರಿಗೆ ದರವೂ ಕಡಿಮೆಯಾಗುತ್ತದೆ. ಜೊತೆಗೆ ಅಂತಿಮ ಹಂತದಲ್ಲಿ ವಿಮಾನ ಏರಲು ಬಯಸಿ ಟಿಕೆಟ್ ಬುಕ್ ಮಾಡುವವರು ನೀಡಬೇಕಿರುವ ಹೆಚ್ಚುವರಿ ದರವೂ ತಪ್ಪುತ್ತದೆ. ಇದರೊಂದಿಗೆ ಹುಬ್ಬಳ್ಳಿಗೆ ಇನ್ನೂ ಹೆಚ್ಚಿನ ವಿಮಾನಗಳೂ ಬಂದುಹೋಗಲು ಅನುಕೂಲವಾಗುತ್ತದೆ. ಸದ್ಯ 8 ಸಾವಿರ ಅಡಿಗೆ ವಿಸ್ತರಣೆಗೊಳ್ಳಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್ ವೇ ಮುಂದಿನ ಹಂತದಲ್ಲಿ 10 ಸಾವಿರ ಅಡಿಗೆ ವಿಸ್ತರಣೆಗೊಳ್ಳುವ ನಿರೀಕ್ಷೆ ಇದೆ. ಹೊಸ ಟ್ಯಾಕ್ಸಿ ವೇ, ಮೇಲ್ಛಾವಣಿ, ಅಗ್ನಿ ಶಾಮಕ ಠಾಣೆಯೂ ನಿರ್ಮಾಣಗೊಳ್ಳಲಿದೆ.
--
ಹಿಂದಿ ಭಾಷಣ ಸ್ಪರ್ಧೆ : ಅಮೋದಿನಿ ಮಹಾಲೆಗೆ ಪ್ರಥಮ, ನಿವೇದಿತಾ ಕರಬಸಣ್ಣವರ ತೃತೀಯ
ಹುಬ್ಬಳ್ಳಿ: ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ 23ನೇ ಬಾಬು ಗಂಗಾಶರಣಸಿಂಗ್ ಸ್ಮಾರಕ ಹಿಂದಿ ಭಾಷಣ ಸ್ಪರ್ಧೆಯಲ್ಲಿ ನಿವೇದಿತಾ ಮಹಾಲೆ ಪ್ರಥಮ ಮತ್ತು ನಿವೇದಿತಾ ಕರಬಸಣ್ಣವರ ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ಮೈಸೂರು ಹಿಂದಿ ಪ್ರಚಾರ ಪರಿಷತ್ನ ಪ್ರತಿಸ್ಪರ್ಧಿಯಾಗಿ ಚಿನ್ಮಯ ವಿದ್ಯಾಲಯದ ಅಮೋದಿನಿ ಮಹಾಲೆ ಮತ್ತು ರೋಟರಿ ಆಂಗ್ಲ ಮಾಧ್ಯಮಿಕ ಶಾಲೆಯ ನಿವೇದಿತಾ ಕರಬಸಣ್ಣವರ ಭಾಗವಹಿಸಿ 'ಗ' ಕ್ಷೇತ್ರದಲ್ಲಿ ಅಮೋದಿನಿ ಮಹಾಲೆ ಮತ್ತು ನಿವೇದಿತಾ ಕರಬಸಣ್ಣವರ ಕ್ರಮವಾಗಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. 'ಗ' ಕ್ಷೇತ್ರದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒರಿಸ್ಸಾ, ಆಸ್ಸಾಂ, ನಾಗಾಲ್ಯಾಂಡ್, ಮಿಜೋರಾಮ, ಪಶ್ಚಿಮ ಬಂಗಾಲ ಮುಂತಾದ ಹಿಂದಿಯೇತರ ಭಾಷಿಕ ರಾಜ್ಯಗಳ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ವಾಕ್ಯಲ್ಲಿ 'ರಾಜ್ಯಮಟ್ಟದಲ್ಲಿ ರಾಷ್ಟ್ರಭಾಷೆ ಹಿಂದಿಯ ಪ್ರಚಾರ ಹೇಗಿರಬೇಕು' ವಿಷಯ ನೀಡಲಾಗಿತ್ತು. ಪ್ರಥಮ ಸ್ಥಾನ ಗಳಿಸಿದ ಅಮೋದಿನಿ ಮಹಾಲೆಗೆ ರು. 10 ಸಾವಿರನಗದು, ನೆನಪಿನ ಕಾಣಿಕೆ, ಪ್ರಮಾಣಪತ್ರ, ತೃತೀಯ ಸ್ಥಾನ ಗಳಿಸಿದ ನಿವೇದಿತಾ ಕರಬಸಣ್ಣವರಗೆ ರು. 5 ಸಾವಿರ ನಗದು, ನೆನಪಿನ ಕಾಣಿಕೆ, ಪ್ರಮಾಣಪತ್ರ ಪಡೆದಿದ್ದಾರೆ.