ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

22ರಿಂದ ಎಪಿಎಂಸಿ ಹಮಾಲಿ ಕಾರ್ಮಿಕರ ಮುಷ್ಕರ

Lingaraj Badiger
Updated On : 7 Jan 2014, 12:28 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 6
ರಾಜ್ಯದ ಎಪಿಎಂಸಿ ಹಮಾಲಿ ಕಾರ್ಮಿಕರು ಜ. 22 ರಿಂದ ಮುಷ್ಕರ ಹೂಡಲಿದ್ದಾರೆ. ಇದೇ ದಿನದಂದು ಬೆಂಗಳೂರಿನ ಕೃಷಿ ಮಾರುಕಟ್ಟೆ ಮಂಡಳಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.  
ಈ ವಿಷಯವನ್ನು ಹುಬ್ಬಳ್ಳಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಮಹೇಶ ಪತ್ತಾರ್, ರಾಜ್ಯದ ಎಪಿಎಂಸಿಗಳಲ್ಲಿ ದುಡಿಯುತ್ತಿರುವ ಹಮಾಲಿ ಕಾರ್ಮಿಕರನ್ನು ಕೃಷಿ ಮಾರುಕಟ್ಟೆ ಇಲಾಖೆ ಹಾಗೂ ಸರ್ಕಾರ ನಿರ್ಲಕ್ಷಿಸುತ್ತಿದೆ. ರಾಜ್ಯ ಬಜೆಟ್‌ನಲ್ಲಿ ಹಮಾಲಿ ಕಾರ್ಮಿಕರಿಗೆ ನ್ಯಾಯ ನೀಡಬೇಕು ಹಾಗೂ ಪ್ರತಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಲು ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಮುಷ್ಕರ ಹೂಡುವುದಾಗಿ ತಿಳಿಸಿದರು.
ಇದಲ್ಲದೇ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಯಾಗಬೇಕು. ಮಾರುಕಟ್ಟೆ ಖಾಸಗೀಕರಣ ಹುನ್ನಾರ ಕೈಬಿಡಬೇಕು. ಹಮಾಲಿ ಕಾರ್ಮಿಕರಿಗೆ ರಾಷ್ಟ್ರೀಯ ಸ್ವಸ್ಥಾ ಭೀಮಾ ಯೋಜನೆ ಜಾರಿಯಾಗಬೇಕು. ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಸೌಲಭ್ಯ ನೀಡಬೇಕು. ಮಾರುಕಟ್ಟೆ ಸಮಿತಿಯಲ್ಲಿ ಹಮಾಲಿ ಪ್ರತಿನಿಧಿಗಳಿಗೆ 2 ಸ್ಥಾನ ಪ್ರಾತಿನಿಧ್ಯ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
23ರಂದು ವಿಧಾನಸೌಧ ಮುತ್ತಿಗೆ: ರಾಜ್ಯದ ಅಕ್ಕಿಗಿರಣಿ, ಎಣ್ಣೆ, ಬೇಳೆ ಮಿಲ್‌ಗಳಲ್ಲಿ, ಎಫ್‌ಸಿಐ ಗೋದಾಮಿನಲ್ಲಿ, ವೇರ್‌ಹೌಸ್, ಆಹಾರ ನಾಗರಿಕ ಪೂರೈಕೆ ಇಲಾಖೆ, ರಾಜ್ಯ ಪಾನೀಯ ನಿಗಮ ಮತ್ತಿತರ ಕಡೆಗಳಲ್ಲಿ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ಹತ್ತಾರು ವರ್ಷಗಳಿಂದ ಮೂಟೆ ಹೊರುತ್ತಾ ಸೌಲಭ್ಯವಿಲ್ಲದೇ ದುಡಿಯುತ್ತಿದ್ದಾರೆ. ಈ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿಯಿಂದ ಗುರುತಿನ ಚೀಟಿ, ಕನಿಷ್ಠ ಕೂಲಿ, ಭವಿಷ್ಯ ನಿಧಿ, ವಿಮಾ ಸೌಲಭ್ಯ, ಗ್ರಾಚ್ಯುಟಿ ಮತ್ತಿತರ ಸೌಲಭ್ಯ ಒದಗಿಸಿಕೊಡುವಂತೆ ಹತ್ತಾರು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಜ. 23ರಂದು ಸಿಐಟಿಯು ನೇತೃತ್ವದಲ್ಲಿ 50 ಸಾವಿರ ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆಂದು ಪತ್ತಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಸಿದ್ದಪ್ಪ ಅಂಬಿಗೇರ, ಹನುಮಂತಪ್ಪ ಜಾಲಗಾರ, ಬಸಣ್ಣ ನೀರಲಗಿ, ಮಂಜುನಾಥ ಹುಜರಾತಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement