ಅನುದಾನಿತ ಶಿಕ್ಷಕರಿಗೂ ಸೌಲಭ್ಯ ನೀಡಿ: ಹೊರಟ್ಟಿ
ಹುಬ್ಬಳ್ಳಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಮರಣ ಶಾಸನವಾಗಲಿರುವ ಸಚಿವ ಸಂಪುಟದ ನಿರ್ಣಯ ಕಾರ್ಯಗತಗೊಳಿಸುವುದನ್ನು ತಕ್ಷಣ ರದ್ದುಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಸಿಎಂ ಸಿದ್ಧರಾಮಯ್ಯಗೆ ಸೋಮವಾರ ಪತ್ರ ಬರೆದಿರುವ ಹೊರಟ್ಟಿ, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ, ಪಿಂಚಣಿಗೆ ಸಂಬಂಧಿಸಿ ಸುಗ್ರಿವಾಜ್ಞೆ ತರಲು ಜ. 3ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನಿಸಿರುವುದು ಅವೈಜ್ಞಾನಿಕ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ನೇಮಕವಾದ ದಿನದಿಂದ ಸಂಬಳ ಭತ್ಯೆ ನೀಡುವ ಬದಲು ಸರ್ಕಾರಿ ಅನುದಾನಕ್ಕೆ ಒಳಪಟ್ಟ ದಿನದಿಂದ ಸೌಲಭ್ಯ ಸಿಗುವಂತೆ ವ್ಯವಸ್ಥೆ ಕಲ್ಪಿಸಲು ಈ ಸುಗ್ರಿವಾಜ್ಞೆ ನೆರವಾಗಲಿದೆ. ಅನುದಾನಕ್ಕೆ ಒಳಪಡದೇ ನೇಮಕವಾದ ದಿನದಿಂದಲೇ ಸರ್ಕಾರಿ ವೇತನ ನೀಡಿದರೆ ರಾಜ್ಯ ಸರ್ಕಾರಕ್ಕೆ ರು. 5 ಸಾವಿರ ಕೋಟಿ ಹೊರೆ ಬೀಳುತ್ತದೆ. ಇದನ್ನು ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.
ಸಚಿವ ಸಂಪುಟದ ಈ ನಿರ್ಣಯ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಕಂಟಕಪ್ರಾಯವಾಗಲಿರುವ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾದ ನಿರ್ಣಯವನ್ನು ಸಚಿವ ಸಂಪುಟ ತೆಗೆದುಕೊಂಡಿರುವುದನ್ನು ಹೊರಟ್ಟಿ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ವಿರೋಧಿಸಿದ್ದಾರೆ.
ಶಿಕ್ಷಕರ ಸಂಘಟನೆಗಳು 3 ತಿಂಗಳಿಂದ ಶಾಂತಿಯುತ ಹೋರಾಟ ನಡೆಸುತ್ತ ಸರ್ಕಾರದ ಗಮನ ಸೆಳೆದಿವೆ. ತಾವು ವೈಯಕ್ತಿಕವಾಗಿ ಈ ಹಿಂದೆ ಮುಖ್ಯಮಂತ್ರಿಗೆ ಪತ್ರ ಬರೆದು, ಮುಖಾಮುಖಿ ಭೇಟಿ ಮಾಡಿ, ಸಮಸ್ಯೆಯ ಗಂಭೀರತೆ ಬಗ್ಗೆ ಮನನ ಮಾಡಿಕೊಟ್ಟಿದ್ದನ್ನು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ನ್ಯಾಯಾಲಯದ ಆದೇಶದಂತೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡುವ ಬಗ್ಗೆ ಭರವಸೆ ನೀಡಿದ್ದಿರೆಂಬುದನ್ನು ಪತ್ರದಲ್ಲಿ ಸ್ಮರಿಸಿದ್ದಾರೆ.
ಈಗಾಗಲೇ ನ್ಯಾಯಾಲಯದ ಆದೇಶದಂತೆ ಎಸ್. ಮಧುಚಂದ ಎಂಬುವರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಿದೆ. ಅದೇ ರೀತಿ ನ್ಯಾಯಾಲಯದ ಆದೇಶ ಪಡೆದ ಸಿಬ್ಬಂದಿ ನ್ಯಾಯಾಂಗ ನಿಂದನಾ ಪ್ರಕರಣಗಳನ್ನು ದಾಖಲಿಸಿ 30ಕ್ಕೂ ಹೆಚ್ಚು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ವೇತನ, ಪಿಂಚಣಿ ಹಾಗೂ ಇತರ ಸೌಲಭ್ಯ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 500ಕ್ಕೂ ಹೆಚ್ಚು ಜನ ಕೋರ್ಟಿನಿಂದ ಆದೇಶ ಪಡೆದಿದ್ದು, ಅವರೂ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಿದಲ್ಲಿ ಅವರಿಗೂ ಕೂಡ ಕೆಲಸಕ್ಕೆ ಹಾಜರಾದ ದಿನದಿಂದ ವೇತನ, ಪಿಂಚಣಿ, ಇತರ ಸೌಲಭ್ಯ ಕೊಡುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ.
ನ್ಯಾಯಾಲಯ ಮೆಟ್ಟಿಲೇರಿರುವ ಶಿಕ್ಷಕರಿಗಷ್ಟೇ ಎಲ್ಲ ಸೌಲಭ್ಯಗಳನ್ನು ಒದಗಿಸುವ ಸರ್ಕಾರದ ನಿರ್ಧಾರ ಶಿಕ್ಷಣದ ವಿರೋಧಿಯಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪುನಃ ಪರಿಶೀಲಿಸಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿ ಕೆಲಸಕ್ಕೆ ಸೇರಿದ ದಿನದಿಂದಲೇ ವೇತನ, ಪಿಂಚಣಿ ಹಾಗೂ ಇತರ ಸೌಲಭ್ಯ ನೀಡಲು ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು ಎಂದು ಪತ್ರದ ಮೂಲಕ ಹೊರಟ್ಟಿ ಆಗ್ರಹಿಸಿದ್ದಾರೆ.