ಮರಳು ಸಾಗಾಣಿಕೆದಾರರ ಮುಷ್ಕರಕ್ಕೆ ಬೆಂಬಲ
ಹುಬ್ಬಳ್ಳಿ: ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿರುವ ಮರಳು ಸಾಗಾಣಿಕೆದಾರರ ಅನಿರ್ದಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಜನಪ್ರತಿನಿಧಿಗಳು ಹಾಗೂ ಇತರ ಗಣ್ಯರು, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು ಮುಷ್ಕರ ನಿರತ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡದ ಸರ್ವಧರ್ಮ ಸಮನ್ವಯ ಮಠದ ಸ್ವಾಮೀಜಿ, ಮರಳು ಸಾಗಾಣಿಕೆಗೆ ಸರ್ಕಾರ ರೂಪಿಸಲು ಹೊರಟಿರುವ ಅವೈಜ್ಞಾನಿಕ ಯೋಜನೆ ವಿರೋಧಿಸಿದರು. ಗೃಹ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ದತ್ತಾತ್ರೇಯ ಉಣಕಲ್, ಬಾರ್-ಬೈಂಡಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಅಲ್ಲಾಭಕ್ಷ ದೊಡ್ಡಮನಿ, ಪ್ಲಂಬಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ ಕಲಘಟಗಿ, ಬಡಿಗೇರ ಕಾರ್ಮಿಕ ಸಂಘದ ಅಧ್ಯಕ್ಷ ನಿಂಗಪ್ಪ ಮಾಳವದೆ ಭೇಟಿ ನೀಡಿ, ಮರಳಿನ ತೊಂದರೆಯಿಂದ ಕಾರ್ಮಿಕರ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರಿಸಿ, ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ, ಮರಳು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ಮರಳು ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿರುವ ಮುಷ್ಕರ ನಿರತ ಮರಳು ಸಾಗಾಣಿಕೆದಾರರು, ಜ. 8ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಸಂಘದ ಕಾರ್ಯದರ್ಶಿ ಪ್ರಭಾಕರ ಉಪಾಧ್ಯ, ಅನ್ವರ ಮ್ಯಾಗೇರಿವಾಲೆ, ದುರ್ಗಪ್ಪ ದೊಡ್ಡಮನಿ, ಶಶಿಧರ ಕೊರವಿ ಮತ್ತಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.