ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸರ್ಕಾರಿಯಾದರೂ ಮಾದರಿ

Mainashree
Updated On : 9 Jan 2014, 10:32 am

ಸರ್ಕಾರಿ ಶಾಲೆಯೆಂದರೆ ಬರೀ ಮೂಗು ಮುರಿಯುವುದಲ್ಲ, ಖಾಸಗಿ ಶಾಲೆಗಳನ್ನು ಮೀರಿಸುವ ಸುಸಜ್ಜಿತ ಸರ್ಕಾರಿ ಶಾಲೆಗಳನ್ನೂ ಕಾಣಬಹುದಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೊರಗಿರುವ ಶಾಲೆಗಳಿಗೆ ಕೆಲ ಶಾಲೆಗಳು ಮಾದರಿಯಾಗಿ ನಿಲ್ಲುತ್ತವೆ. ಅಂದ ಹಾಗೆ, ಸರ್ಕಾರ ಇಂಥ ಶಾಲೆಗಳಿಗೆ ವಿಶೇಷ ಕಾಳಜಿ, ಹಣ ಸಹಾಯ ಮಾಡಿದೆ ಎಂದರ್ಥವಲ್ಲ. ಬದಲಾಗಿ ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಆಸ್ಥೆಯಿಂದಾಗಿ ಈ ರೂಪ ಪಡೆದಿವೆ. ಸರ್ಕಾರ ಏನೂ ಮಾಡಿಲ್ಲ ಎನ್ನುವುದನ್ನು ಬಿಟ್ಟು ನಾವೇನು ಮಾಡಬಹುದು ಎಂದು ಶಿಕ್ಷಕರಾದಿಯಾಗಿ ಎಲ್ಲರೂ ಯೋಚಿಸಿದ್ದೇ ಆದಲ್ಲಿ ಎಲ್ಲ ಸರ್ಕಾರಿ ಶಾಲೆಗಳನ್ನೂ ಮಾದರಿಯಾಗಿಸಬಹುದು. ಇದಕ್ಕೆ ಇಚ್ಛಾಶಕ್ತಿ ಬೇಕಷ್ಟೇ. ಜಿಲ್ಲೆಯಲ್ಲಿರುವ ಇಂಥ ಆಯ್ದ ಶಾಲೆಗಳ ಝಲಕ್ ಇಲ್ಲಿದೆ.

ಗಾಂಧಿನಗರ ಶಾಲೆಯಲ್ಲಿ ಎಲ್ಲವೂ ಶಿಸ್ತುಬದ್ಧ
ಧಾರವಾಡ: ಗಾಂಧಿನಗರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 5 ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ ಎಂದು ಸಾಕ್ಷೀಕರಿಸಿದೆ. ಸರ್ಕಾರ ನೀಡಿದ ಸೌಲಭ್ಯದಲ್ಲಿಯೇ ಈ ಶಾಲೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಶಾಲಾ ಸುಧಾರಣಾ ಸಮಿತಿ ಹಾಗೂ ಶಾಲಾ ಶಿಕ್ಷಕರ ಜಾಣ್ಮೆಯ ಫಲವಾಗಿ ಕೊಳಚೆ ಪ್ರದೇಶದ ಹಾಗೂ ಬಡ ವಿದ್ಯಾರ್ಥಿಗಳೇ ಓದುತ್ತಿರುವ ಈ ಶಾಲೆ ಶಿಕ್ಷಣ ನಗರಿ ಧಾರವಾಡದಲ್ಲಿ ಮಾದರಿ ಶಾಲೆ ಎನಿಸಿಕೊಂಡಿದೆ. ಶುದ್ಧ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರಸ್ತೆ, ಸುಸಜ್ಜಿತ ಕಟ್ಟಡ ಹಾಗೂ ಕಾಂಪೌಂಡ್, ಮೈದಾನ ಅಲ್ಲದೇ, ಮಕ್ಕಳಿಗಾಗಿಯೇ ಹೂ ತೋಟ ಸಹ ಇಲ್ಲಿದೆ. ಈ ಶಾಲೆಯಲ್ಲಿ 221 ಮಕ್ಕಳು ಓದುತ್ತಿದ್ದು, 100ಕ್ಕೆ 100ರಷ್ಟು ಹಾಜರಾತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅನುಗುಣವಾಗಿ 10 ಕೊಠಡಿಗಳಿವೆ. ಗುಣಮಟ್ಟದ ಶಿಕ್ಷಣ ನೀಡಲು ಎಂಟು ಶಿಕ್ಷಕರಿದ್ದಾರೆ. ಈ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಕೆ. ಎಚ್. ನಾಯಕ ಅವರಿಗೆ ಈ ಶಾಲೆಯನ್ನು ಮಾದರಿ ಶಾಲೆ ಮಾಡಿದ ಶ್ರೇಯಸ್ಸು ಸಲ್ಲುತ್ತದೆ. ಇವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಯೂ ಬಂದಿದೆ.

 ಸಾಯಿನಗರ ಶಾಲೆಯಲ್ಲಿ ಸಾಕಷ್ಟು ಸೌಲಭ್ಯ
ಹುಬ್ಬಳ್ಳಿ: ನಗರ ವ್ಯಾಪ್ತಿಯಲ್ಲಿದ್ದರೂ ಸಾಯಿನಗರ ಶಾಸಕರ ಮಾದರಿ ಶಾಲೆಯ ಮಕ್ಕಳ ಸಂಖ್ಯೆ 467. 18 ಶಿಕ್ಷಕರೊಂದಿಗೆ ಗುಣಮಟ್ಟದ ಶಿಕ್ಷಣ, ಸೌಲಭ್ಯ ಇಲ್ಲಿದೆ. ಸುಸಜ್ಜಿತ 11 ಶಾಲಾ ಕೊಠಡಿಗಳನ್ನು ಹೊಂದಿರುವುದು ಶಾಲೆಯ ವಿಶೇಷ. ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಡಾ. ಪ್ರಭಾಕರ ಲಗಮಣ್ಣವರ ಬಂದ ಬಳಿಕ ಶಾಲೆಯ ಚಿತ್ರಣವೇ ಬದಲಾಯಿತು. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಉತ್ತಮ ಆಸನ, ಶುದ್ಧ ಕುಡಿಯುವ ನೀರು ಮಕ್ಕಳಿಗೆ ಸಿಗುತ್ತಿದ್ದು, ಮುಂದುವರಿದ ಭಾಗವಾಗಿ 14 ನಲ್ಲಿ ಅಳವಡಿಸಲಾಗುತ್ತಿದೆ. ಶಾಲೆ ಬೃಹತ್ ಮೈದಾನ ಹೊಂದಿದ್ದು ವಿದ್ಯಾರ್ಥಿಗಳಿಗೆ ಆಟವಾಡಲು ಅನುಕೂಲವಾಗಿದೆ. ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಉದ್ಯಾನವನ್ನೂ ಮಾಡಲಾಗುತ್ತಿದೆ. 10 ಶೌಚಾಲಯವನ್ನೂ ನಿರ್ಮಿಸಲಾಗಿದೆ. ಸರ್ಕಾರದಿಂದ ಬರುವ ಅನುದಾನ ಇಲ್ಲಿ ಸದ್ಭಳಕೆ ಮಾಡಿಕೊಳ್ಳಲಾಗಿದೆ. ಮಾನವ ಸಂಪನ್ಮೂಲ ಇಲಾಖೆಯಿಂದ ಮತ್ತಷ್ಟು ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ರು. 1 ಕೋಟಿ ಅನುದಾನ ಕೋರಲಾಗಿದೆ.

ವೀರಾಪುರ ಶಾಲೆಯಲ್ಲಿ ಸೌಲಭ್ಯ ಭರಪೂರ
ಹುಬ್ಬಳ್ಳಿ: ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ-ನಂ. 4 ಆವರಣದೊಳಕ್ಕೆ ಕಾಲಿಡುತ್ತಿದ್ದಂತೆಯೇ ಪೂಜನೀಯ ವಾತಾವರಣ. ಶಾಲೆಗೆ ಶೋಭೆ ತಂದಿರುವುದು ಗೋಡೆ ಬರಹ, ಚಿತ್ರಗಳು. ರಾಷ್ಟ್ರಧ್ವಜ, ರಾಷ್ಟ್ರಲಾಂಛನ, ರಾಷ್ಟ್ರೀಯ ಕ್ರೀಡೆಗಳು, ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿಯ ಚಿತ್ರಗಳನ್ನು ಶಾಲಾ ಆವರಣದ ಗೋಡೆಯ ಮೇಲೆ ಬಿಡಿಸುವ ಮೂಲಕ ವಿದ್ಯಾರ್ಥಿಗಳ ಸ್ಮೃತಿ ಪಟಲದಲ್ಲಿಅಚ್ಚಳಿಯದೇ ಉಳಿಯುವಂತೆ ಮಾಡಲಾಗಿದೆ. ಶಾಲೆಯ ಎಲ್ಲ ಗೋಡೆಗಳ ಮೇಲೆ ಗಾದೆ ಮಾತನ್ನು ಬರೆಯುವ ಮೂಲಕ ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿಕೊಡಲಾಗುತ್ತಿದೆ. ನಿತ್ಯ ಪ್ರಾರ್ಥನೆ, ಪತ್ರಿಕೆ ವಾಚನ, ಗಾದೆ ಮಾತು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯಧಾರಿತ ಶಿಕ್ಷಣ ನೀಡಲಾಗುತ್ತಿದೆ. ಶುದ್ಧ ಕುಡಿವ ನೀರು, ಕುಳಿತುಕೊಳ್ಳಲು ಆಸನ ಸೇರಿದಂತೆ ಎಲ್ಲ ಸೌಲಭ್ಯವಿದೆ.

ಖಾಸಗಿಯನ್ನೂ ಹಿಂದಿಕ್ಕಿದ ಲ್ಯಾಮಿಂಗ್ಟನ್ ಶಾಲೆ
ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿರುವ ಲ್ಯಾಮಿಂಗ್ಟನ್ ಶಾಲೆ ಮಾದರಿ ಶಾಲೆಗಳಲ್ಲೊಂದು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಶಾಲೆ ಇದಾಗಿದೆ. ಶಾಲೆಯ ಮುಂಭಾಗದಲ್ಲಿಯೇ ಸಾಕಷ್ಟು ವಾಹನಗಳು ಓಡಾಡುತ್ತಿದ್ದರೂ ಶಾಲಾ ಕೊಠಡಿಗೂ ರಸ್ತೆಗೆ ಸಾಕಷ್ಟು ಅಂತರವಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂಥ ಸಾಕಷ್ಟು ಪ್ರಮುಖರು ಓದಿದ ಶಾಲೆ ಇದಾಗಿದೆ. ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಶಿಕ್ಷಕರಾಗಿ ಪಾಠ ಮಾಡಿದ ಶಾಲೆಯೂ ಹೌದು. ಶಾಲೆಗೆ ವಿಶಾಲವಾದ ಮೈದಾನವಿದೆ. ಹಳೆಯ ಕಟ್ಟಡಹೊಂದಿದ್ದರೂ ಅಗತ್ಯತೆಗನುಗುಣವಾಗಿ ಹೊಸ ಕೊಠಡಿಯನ್ನೂ ನಿರ್ಮಿಸಲಾಗಿದೆ. ಹಳೆಯ ಕಟ್ಟಡದ ಸೂಕ್ತ ನಿರ್ವಹಣೆ ಮಾಡುತ್ತಿರುವುದರಿಂದ ಶಾಲೆಯ ಅಂದಕ್ಕೆ ಧಕ್ಕೆ ಬಂದಿಲ್ಲ. ಶುದ್ಧ ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನದಂತಹ ಎಲ್ಲ ಸೌಲಭ್ಯಗಳು ಶಾಲೆ ಹೊಂದಿದೆ. ನುರಿತ ಶಿಕ್ಷಕರು, ಉತ್ತಮ ಶಿಕ್ಷಣ ಇಲ್ಲಿದೆ. ಖಾಸಗಿಯ ಅಬ್ಬರದ ಮಧ್ಯೆಯೂ ಶಾಲೆ ಗತವೈಭವ ಉಳಿಸಿಕೊಂಡು ಬಂದಿದೆ.

 ನಲಿಕಲಿಯಲ್ಲಿ ನಂಬರ್‌ಒನ್ ಶಾಲೆ
ಧಾರವಾಡ: ನಲಿ-ಕಲಿ ಯೋಜನೆಯಲ್ಲಿ ಈ ಶಾಲೆ ರಾಜ್ಯದಲ್ಲಿಯೇ ನಂಬರ್ ಒನ್ ಎಂಬ ಖ್ಯಾತಿ ಪಡೆದಿದೆ. ಧಾರವಾಡ ತಾಲೂಕಿನ ತಡಕೋಡ ಹರಿಜನ ಕೇರಿಯಲ್ಲಿರುವ ಈ ಶಾಲೆಯಲ್ಲಿ ಸರ್ಕಾರದ ಉಚಿತ ಸಮವಸ್ತ್ರ, ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ ಹಾಗೂ ಸರ್ವ ಶಿಕ್ಷಣ ಅಭಿಯಾನದ ಬಾ ಮರಳಿ ಶಾಲೆಗೆ, ಚಿನ್ನರ ಅಂಗಳ ಹಾಗೂ ನಲಿ-ಕಲಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. 1997ರಲ್ಲಿ 18 ಮಕ್ಕಳು ಮತ್ತು ಓರ್ವ ಶಿಕ್ಷಕಿಯೊಂದಿಗೆ ಪ್ರಾರಂಭವಾದ ಈ ಶಾಲೆ, ಇಂದು ನಾಲ್ವರು ಶಿಕ್ಷಕರು 150 ಮಕ್ಕಳನ್ನು ಹೊಂದಿದೆ.  ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್, ಪ್ರತ್ಯೇಕ ಶೌಚಾಲಯ ಸೌಲಭ್ಯವುಳ್ಳ ಮಾದರಿ ಶಾಲೆಯಾಗಿ ಬೆಳೆದು ನಿಂತಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಧಾನ ಗುರುಗಳ ಹುದ್ದೆ ನೇಮಕವಾದ ಧಾರವಾಡ ಜಿಲ್ಲೆಯ ಪ್ರಥಮ ಶಾಲೆ ಎಂಬ ಕೀರ್ತಿಗೂ ಈ ಶಾಲೆ ಪಾತ್ರವಾಗಿದೆ. ಇತ್ತೀಚಿಗೆ ಅಜಿಂ ಪ್ರೇಮ್‌ಜಿ ಫೌಂಡೇಶನ್ ಈ ಹರಿಜನ ಕೇರಿಯ ಮಾದರಿ ಶಾಲೆಗೆ ಭೇಟಿ ನೀಡಿ, ಇದೇ ಮಾದರಿಯನ್ನು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿರುವುದು ಶಾಲೆಗೆ ಗೌರವ ತರುವ ವಿಷಯ.

 ಇಂಗ್ಲಿಷ್ ಮಾಧ್ಯಮಕ್ಕೆ ಸೆಡ್ಡು ..!
ಹೆಬ್ಬಳ್ಳಿ: ಇಂಗ್ಲಿಷ್ ಮಾಧ್ಯಮದ ಪ್ರಭಾವದ ಮಧ್ಯೆಯೂ ಎಲ್ಲರೂ ನಿಬ್ಬೆರಗಾಗುವಂತೆ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯೊಂದು ಹೆಬ್ಬಳ್ಳಿ ಗ್ರಾಮದಲ್ಲಿ ತಲೆ ಎತ್ತಿ ನಿಂತಿದೆ. ಸುಮಾರು 145 ವರ್ಷಗಳ ಇತಿಹಾಸ ಹೊಂದಿದ ಈ ಶಾಲೆ ಸದ್ಯ 551ವಿದ್ಯಾರ್ಥಿನಿಯರಿಗೆ ವಿದ್ಯೆ ಧಾರೆ ಎರೆಯುತ್ತಿದೆ. ಇಲ್ಲಿ 1ರಿಂದ 8ನೇ ತರಗತಿವರೆಗೆ ವರ್ಗಗಳಿದ್ದು, 16 ಶಿಕ್ಷಕರು ಇಲ್ಲಿ ಪಾಠ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಣ ಒಂದೇ ಅಲ್ಲದೇ ಪರಿಸರ ಕಾಳಜಿ, ಆಟೋಟ, ಬದುಕಿನ ಮೌಲ್ಯಗಳನ್ನು ಸಹ ಈ ಶಾಲೆ ಹೆಣ್ಣು ಮಕ್ಕಳಿಗೆ ಧಾರೆ ಎರೆಯುತ್ತಾ ಬರುತ್ತಿದೆ. ಪ್ರತಿ ವರ್ಷವೂ ಶಿಕ್ಷಣ ಫೌಂಡೇಶನ್ ದೆಹಲಿ ಪ್ರವಾಸದ ಪರೀಕ್ಷೆಯಲ್ಲಿ ಈ ಶಾಲೆಯ ಒಂದಿಲ್ಲ ಒಂದು ಮಗು ಆಯ್ಕೆಯಾಗುತ್ತಿರುತ್ತದೆ. ಸರ್ಕಾರ ನಡೆಸುವ ವಿವಿಧ ಪರೀಕ್ಷೆಯಲ್ಲಿ ಈ ಶಾಲೆ ಮಕ್ಕಳು ತೇರ್ಗಡೆ ಹೊಂದುತ್ತಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಈ ಶಾಲೆ ಮುಂಚೂಣಿಯಲ್ಲಿದ್ದಾರೆ. ಶಾಲೆಯ ಮಕ್ಕಳ ಶಿಸ್ತು ಹಾಗೂ ಶಿಕ್ಷಕರ ಪರಿಶ್ರಮಕ್ಕೆ ಉತ್ತಮ ಶಾಲೆ ಎಂಬ ಪ್ರಶಸ್ತಿ ಲಭಿಸಿದ್ದು, ಎರಡು ಬಾರಿ ಈ ಶಾಲೆ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಪಡೆದುಕೊಂಡಿದೆ.

ಮಕ್ಕಳನ್ನು ಆಕರ್ಷಿಸುತ್ತಿರುವ ಶಾಲೆ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದ ನಂ. 1 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಎಲ್ಲ ಸೌಕರ್ಯಗಳನ್ನು ಹೊಂದಿ ಗುಣಮಟ್ಟದ ಶಿಕ್ಷಣವನ್ನೂ ನೀಡುತ್ತ ಮಕ್ಕಳನ್ನು ಸೆಳೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು, ಗ್ರಾಮಸ್ಥರ ವಿಶೇಷ ದೇಣಿಗೆಯೊಂದಿಗೆ  ಎಲ್ಲ ಸೌಕರ್ಯಗಳನ್ನು ಹೊಂದಿದೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವರೆಗೆ 80 ವಿದ್ಯಾರ್ಥಿಗಳು ಓದುತ್ತಿದ್ದು, ನಾಲ್ವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಮಾಡುತ್ತಿದ್ದಾರೆ. ಶಾಲೆ ಸುಸಜ್ಜಿತ ನಾಲ್ಕು ಕೊಠಡಿಗಳನ್ನು ಹೊಂದಿದ್ದು, ಗೋಡೆಗಳ ಮೇಲೆ ಅಕ್ಷರ-ಬರಹ, ಪ್ರಾಣಿ-ಪಕ್ಷಿ, ನಕ್ಷೆ, ಗಣಿತ ಆಕೃತಿಗಳು, ಆಂಗ್ಲ ಅಕ್ಷರಗಳು, ಭೂಪಟ ನಕ್ಷೆ, ಮಹಾತ್ಮರ ಚಿತ್ರಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ. ಇನ್ನು, ಬಿಸಿಯೂಟ, ಶುದ್ದ ಕುಡಿಯುವ ನೀರಿಗಾಗಿ ಪ್ರತ್ಯೇಕ ಕೊಠಡಿ, ಶೌಚಾಲಯ, ಮೂತ್ರಾಲಯ, ಚಿಕ್ಕದಾದ ಕೈತೋಟವೂ ಇದೆ. ಪುಸ್ತಕವಿಡಲು ರ್ಯಾಕ್, ಗಡಿಯಾರ, ಕುರ್ಚಿ, ತಟ್ಟೆ, ಮೈಕ್ ಸೆಟ್‌ನ್ನು ಗ್ರಾಮಸ್ಥರು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement