ಸುದ್ದಿ ಸಂಕ್ಷೇಪ
ಇಂದು ಕಲಿಕೋತ್ಸವ
ಕಲಘಟಗಿ: ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಜ. 9ರಂದು ಬೆಳಗ್ಗೆ 9ಕ್ಕೆ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕಲಿಕೋತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಜಿ. ಪೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆ
ಧಾರವಾಡ: ತಾಲೂಕಿನ ಗರಗ ಗ್ರಾಮದ ವ್ಯಕ್ತಿಯೋಬ್ಬರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಗಂಗಪ್ಪ ಧರೆಪ್ಪ ಮಡಿವಾಳರ (48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಪರೀತ ಮದ್ಯ ಸೇವಿಸುತ್ತಿದ್ದ ಈತ, ಇತ್ತೀಚೆಗೆ ಮದ್ಯ ಸೇವನೆ ತ್ಯಜಿಸಿದ್ದ. ಇದರಿಂದ ಮಾನಸಿಕ ಖಿನ್ನನಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಾಳೆ ಉಚಿತ ತಪಾಸಣೆ
ಹುಬ್ಬಳ್ಳಿ: ಹೆಗ್ಗೇರಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯದ ಪಂಚಕರ್ಮ ಸ್ನಾತಕೋತ್ತರ ವಿಭಾಗದ ವತಿಯಿಂದ ಜ.10ರಿಂದ ಒಂದು ವಾರ ಪುರುಷ ಬಂಜೆತನ ಮತ್ತು ಪುರುಷರಲ್ಲಿನ ಇನ್ನಿತರ ಲೈಂಗಿಕ ಸಮಸ್ಯೆಗಳ ಕುರಿತು ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ. ಸ್ವಪ್ನಿಲ್ ಧೋರಣ 9901298675, ಡಾ. ಅಭಿನವ ರಾಥೋರ್ 8892743647, ಡಾ.ಎ.ಐ. ಸಣಕಲ್ 9243201129ನ್ನು ಸಂಪರ್ಕಿಸಬಹುದು.
14ರಂದು ದುಂಡಿ ಎತ್ತುವ ಸ್ಪರ್ಧೆ
ಧಾರವಾಡ: ತಾಲೂಕಿನ ಮದಿಕೊಪ್ಪ ಗ್ರಾಮದ ಪಾಡುರಂಗ ದೇವಸ್ಥಾನ ಆವರಣದಲ್ಲಿ ಜ. 14 ರಂದು ಬೆಳಗ್ಗೆ 10ಕ್ಕೆ ಸಂಗ್ರಾಣಿ ಕಲ್ಲು ಮತ್ತು ದುಂಡಿ ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ. ಶ್ರೀ ಕರೆಮ್ಮದೇವಿ ಕಮಿಟಿ ವತಿಯಿಂದ ಈ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ: 9008698239 ಸಂಪರ್ಕಿಸಬಹುದು.
ಇಂದು ಬಿಆರ್‌ಟಿಎಸ್ ಸಂವಾದ
ಹುಬ್ಬಳ್ಳಿ: ಜೆಸಿ ನಗರದಲ್ಲಿರುವ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜ. 9ರ ಬೆಳಗ್ಗೆ 11.30ಕ್ಕೆ ವಿಶ್ವ ಬ್ಯಾಂಕ್ ನೆರವಿನ ಬಿಆರ್‌ಟಿಎಸ್ ಯೋಜನೆ ಕುರಿತು ಬಿಆರ್‌ಟಿಎಸ್ ಅಧಿಕಾರಿಗಳು ಮತ್ತು ಚೇಂಬರ್ ಆಫ್ ಕಾಮರ್ಸ್‌ನ ಸದಸ್ಯರ ಮಧ್ಯೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಸಂತ ಲದವಾ ಸಂವಾದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆಯಿಂದ ವಿಶೇಷ ಬಜಾರ್
ಧಾರವಾಡ: ಇಲ್ಲಿನ ಕಸ್ತೂರಬಾ ಮಹಿಳಾ ಸ್ವ-ಸಹಾಯ ಬಳಗದಿಂದ ವಿಶೇಷ ಬಜಾರ್ ಆಯೋಜಿಸಲಾಗಿದೆ. ಮಹಿಳೆಯರು ಕಸೂತಿ, ಕರಕುಶಲ ವಸ್ತುಗಳು, ಸಿರಿಧಾನ್ಯಗಳು, ಮತ್ತು ಸಾವಯವ ಆಹಾರ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಜ. 10,11 ಮತ್ತು 12ರ ಸಂಜೆ 4ರಿಂದ 8ರವರೆಗೆ ಗಾಂಧಿನಗರದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ವಿವರಗಳಿಗೆ 9482929940 ಸಂಪರ್ಕಿಸಬಹುದು.