ಸೆಮಿಸ್ಟರ್ ಪದ್ಧತಿ ಕೈಬಿಡಲು ಆಗ್ರಹ
ಧಾರವಾಡ: ಐಟಿಐ ಶಿಕ್ಷಣಕ್ಕೆ ಅಳವಡಿಸಿರುವ ಸೆಮಿಸ್ಟರ್ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ಎಐಡಿವೈಒ ಹಾಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಪ್ರತಿನಿಧಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಹೊಸದಾಗಿ ಜಾರಿಗೊಳಿಸಿರುವ ಸೆಮಿಸ್ಟರ್ ಪದ್ಧತಿಯನ್ನು ಕೂಡಲೇ ಕೈಬಿಡಬೇಕು. ಯಥಾಸ್ಥಿತಿಯಂತೆ ದೀರ್ಘಕಾಲೀನ ಕೋರ್ಸ್ನ್ನು ನಡೆಸಬೇಕು. ಮುಂದೆ ಯಾವುದೇ ರೀತಿಯ ಪಠ್ಯಕ್ರಮ ಬದಲಾವಣೆಗೆ ಸಾಕಷ್ಟು ಸಮಯಾವಕಾಶ ನೀಡಿ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದುವರಿಯಬೇಕು ಎಂದು ಆಗ್ರಹಿಸಿದರು. ಐಟಿಐಗಳಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಸೆಮಿಸ್ಟರ್ ಅಳವಡಿಕೆ ಬಗ್ಗೆ ಎಲ್ಲ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ತಿಳಿಸಿಲ್ಲ. ಇದರಿಂದ ತರಬೇತಿಗೆ ಸಮಯಾವಕಾಶ ಕಡಿಮೆಯಾಗಿ ಪರೀಕ್ಷೆ ಮತ್ತು ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ. ಹೆಚ್ಚಿನ ಅಂಕ ಪಡೆದರೂ ಉತ್ತಮ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಉದ್ಯೋಗಾರ್ಹತೆಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.