ಕಾಮಗಾರಿ ಮುಕ್ತಾಯಕ್ಕೆ ಅಧಿಕಾರಿಗಳಿಗೆ ಡೆಡ್‌ಲೈನ್
ಧಾರವಾಡ: ಜಿಲ್ಲೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಮುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಮಯ ನಿಗದಿಪಡಿಸಿ ಆದೇಶಿಸಿದೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ, ನವಲಗುಂದ, ಧಾರವಾಡ ಮುಂತಾದೆಡೆ ಕುಡಿಯುವ ನೀರು, ರಸ್ತೆ ದುರಸ್ತಿ, ಹು-ಧಾ ಮಧ್ಯದ ಚತುಷ್ಪಥ, ತ್ವರಿತ ಬಸ್ ಸಂಚಾರ ವ್ಯವಸ್ಥೆ ಮುಂತಾದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿವೆ. ಬೇಗ ಮುಗಿಸಲು ಸಿಎಂ ಜತೆ ಚರ್ಚಿಸಿ ಅನುದಾನ ಬಿಡುಗಡೆ ಪ್ರಯತ್ನಿಸುವೆ. ಆಹಾರ-ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿ 30 ಲಕ್ಷ ಅರ್ಜಿಗಳು ಸರ್ಕಾರದ ಎದುರಿದ್ದು, ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಪಡಿತರ ಚೀಟಿ ಫೋಟೋ, ಬಯೋವುಟ್ರಿಕ್ ಪಡೆಯುವ ಕೇಂದ್ರಗಳನ್ನು ಸದ್ಯಕ್ಕೆ ಬಂದ್ ಮಾಡಿದೆ. ಕರ್ನಾಟಕ ಒನ್ ಕೇಂದ್ರದಲ್ಲಿ ಈ ಸೌಲಭ್ಯವಿದ್ದು, ಹೊಸದಾಗಿ ಕಾರ್ಡ್ ಮಾಡಿಸುವವರು ಅಲ್ಲಿ ಫೋಟೋ, ಬಯೋವುಟ್ರಿಕ್ ನೀಡಿ. ಅವಳಿ ನಗರದ ರಸ್ತೆಗಳನ್ನು ಫೆ. 7ರೊಳಗೆ ಸರಿಪಡಿಸಲಾಗುವುದು. ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೆಲಸ ಮಾಡದೆ ಜನರಿಂದ ದೂರು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಜ. 16ರಂದು ಜಿಲ್ಲೆಗೆ ಆಗಮಿಸುತ್ತಿದ್ದು, ಆಗ ನೂತನ ಕಚೇರಿ ಆರಂಭಿಸುವುದಾಗಿ ತಿಳಿಸಿದರು.